ಬೆಂಗಳೂರು: ಉಡುಪಿಯ ಶ್ರೀಕೃಷ್ಣ ಮಠದ ಅಷ್ಟಮಠಗಳ ಪೈಕಿ ಒಂದಾಗಿರುವ ಶ್ರೀ ಶಿರೂರು ಮಠಕ್ಕೆ 16 ವರ್ಷದ ಅಪ್ರಾಪ್ತರಿಗೆ ಮಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ತೀರ್ಪುನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ ಎಂದು ಬಾರ್ ಎಂಡ್ ಬೆಂಚ್ ವರದಿ ಮಾಡಿದೆ.
ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಪೀಠವು ಸುದೀರ್ಘವಾಗಿ ನಾಲ್ಕು ತಾಸುಗಳಿಗೂ ಹೆಚ್ಚು ಕಾಲ ವಾದ-ಪ್ರತಿವಾದವನ್ನು ಆಲಿಸಿತು.
ತಿದ್ದುಪಡಿ ಮಾಡಲಾದ ಮನವಿಯನ್ನು ಅರ್ಜಿದಾರರ ಪರವಾಗಿ ಸಲ್ಲಿಸಿದ್ದ ವಕೀಲ ಡಿ. ಆರ್. ರವಿಶಂಕರ್ ಅಪ್ರಾಪ್ತರಿಗೆ ಸನ್ಯಾಸವನ್ನು ಹೇರುವುದರಿಂದ ಅವರು ಐಹಿಕ ಭೋಗಗಳನ್ನು ಪರಿತ್ಯಾಗ ಮಾಡಬೇಕಾಗುತ್ತದೆ. ಇದು ಸಂವಿಧಾನದ 21 ಮತ್ತು 39 (ಇ) ಮತ್ತು (ಎಫ್) ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದರು.
ಇದಕ್ಕೆ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಎಸ್. ಎಸ್. ನಾಗಾನಂದ್ ಅವರು “18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸನ್ಯಾಸ ದೀಕ್ಷೆ ನೀಡುವುದಕ್ಕೆ ಯಾವುದೇ ಶಾಸನಬದ್ಧ, ಸಂವಿಧಾನಬದ್ಧವಾದ ನಿರ್ಬಂಧವಿಲ್ಲ ಮತ್ತು ಅದು ಅಪಾಯಕರ ಅಭ್ಯಾಸವಲ್ಲ” ಎಂದು ಪೀಠಕ್ಕೆ ತಿಳಿಸಿದರು.
ಉಡುಪಿಯ ಅಷ್ಟಮಠಗಳಲ್ಲಿ ಬ್ರಹ್ಮಚಾರಿ, ಅವಿವಾಹಿತರಿಗೆ ಮಾತ್ರ ಸನ್ಯಾಸ ದೀಕ್ಷೆ ನೀಡುವ ಪರಂಪರೆಯಿದೆ. ಜೊತೆಗೆ ಪೀಠಾಧಿಪತಿಯಾಗುವವರ ಕೌಟುಂಬಿಕ ಹಿನ್ನೆಲೆ, ಶಾಸ್ತ್ರೀಯ ಅಧ್ಯಯನದ ಕಡೆಗಿನ ಅವರ ಒಲವು, ಶ್ರೀ ಜಯತೀರ್ಥ ರಚಿಸಿರುವ ಶ್ರೀಮನ್ ನ್ಯಾಯಸುಧಾ ಅಧ್ಯಯನ ಮಾಡುವ ಶಕ್ತಿ ಹೊಂದಿರುವುದು ಮತ್ತು ಶ್ರೀ ಮಧ್ವಾಚಾರ್ಯರ ತತ್ವಗಳನ್ನು ಪ್ರತಿಪಾದಿಸುವುದನ್ನು ವಿಶೇಷವಾಗಿ ಗಮನಿಸಲಾಗುತ್ತದೆ. ಅವರ ಜಾತಕ ಪರಿಶೀಲಿಸುವ ಮೂಲಕ ಖಾತರಿಪಡಿಸಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪೀಠಾಧಿಪತಿ ಸ್ಥಾನಕ್ಕೆ ಪರಿಗಣಿಸಲ್ಪಟ್ಟವರು 18 ವರ್ಷಕ್ಕಿಂತ ಚಿಕ್ಕವರಾದರೆ ಅದು ಕಾಕತಾಳೀಯವಷ್ಟೆ” ಎಂದು ಹೇಳಿದರು
ಅರ್ಜಿದಾರರ ಪರ ವಕೀಲ ಡಿ ಆರ್ ರವಿಶಂಕರ್ ಅವರು “ ಹಾಲಿ ಪೀಠಾಧಿಪತಿ ಶಿರೂರು ಮಠಕ್ಕೆ ನಡೆಕೊಂಡವರಲ್ಲ. ಅವರು ಸೋದೆ ವಾದಿರಾಜ ಮಠದ ಅನುಯಾಯಿಯೊಬ್ಬರ ಪುತ್ರರಾಗಿದ್ದಾರೆ. ಪೀಠಾಧಿಪತಿಯಾಗುವವರಿಗೆ ಆಸ್ತಿ ನಿರ್ವಹಣೆಯ ಹೊಣೆಗಾರಿಕೆಯಿದ್ದು, ಕಾನೂನು ಪ್ರಕಾರ ಅಪ್ರಾಪ್ತರು ಆಸ್ತಿ ಹೊಣೆಗಾರಿಕೆ ನಿಭಾಯಿಸುವಂತಿಲ್ಲ. ಆದ್ದರಿಂದ, ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಿಸಿರುವ ಕ್ರಮವನ್ನು ಸಂವಿಧಾನಬಾಹಿರ ಎಂದು ಘೋಷಿಸಬೇಕು” ಎಂದು ಕೋರಿದರು ಎಂದು ವರದಿ ಹೇಳಿದೆ.
ಸೋದೆ ವಾದಿರಾಜ ಮಠದ ಪರ ವಕೀಲರು “ಮನವಿದಾರರ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಇದೊಂದು ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿದ ಅರ್ಜಿಯಾಗಿದೆ. ಅರ್ಜಿದಾರ ಲಾತವ್ಯ ಆಚಾರ್ಯ ಹಾಗೂ ಎರಡನೇ ಅರ್ಜಿದಾರ ಶ್ರೀನಿವಾಸ ಆಚಾರ್ಯ ಇವರು ಶಿರೂರು ಮಠದ ಹಿಂದಿನ ಪೀಠಾಧಿಪತಿಯ ಸಹೋದರರು. ಮೂರನೇ ಅರ್ಜಿದಾರ ಶ್ರೀನಿವಾಸ ಆಚಾರ್ಯ ಅವರ ಮಗ. ನಾಲ್ಕನೇ ಅರ್ಜಿದಾರ ಲಾತವ್ಯ ಆಚಾರ್ಯ ಅವರ ಮಗ. ಶಿರೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಅವರು ಒಟ್ಟಿಗೆ ಸೇರಿ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಲಾತವ್ಯ ಆಚಾರ್ಯ ಅವರ ಮಗನನ್ನು ಮಠದ ಪೀಠಾಧಿಪತಿಯಾಗಿ ಮಾಡಬೇಕು ಎಂದು ನಿರ್ಧರಿಸಿದ್ದರು. ಅದು ಸಾಧ್ಯವಾಗದಿದ್ದಾಗ ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿ ಹಿನ್ನಡೆ ಅನುಭವಿಸಿದ ನಂತರ ಹೈಕೋರ್ಟ್ನಲ್ಲಿ ಈ ಪಿಐಎಲ್ ಸಲ್ಲಿಸಿದ್ದಾರೆ” ಎಂದು ವಾದಿಸಿದರು.
ಉಡುಪಿಯ ಅಷ್ಟ ಮಠಗಳನ್ನು ದ್ವಂದ್ವ ಮಠಗಳಾಗಿ ನಾಲ್ಕು ಜೊತೆ ಮಾಡಲಾಗಿದೆ. ಶಿರೂರು ಹಾಗೂ ಸೋದೆ ಮಠಗಳೂ ದ್ವಂದ್ವ ಮಠಗಳಾಗಿವೆ. ದ್ವಂದ್ವ ಮಠಗಳಲ್ಲಿ ಯಾವುದೇ ಒಂದು ಮಠದ ಪೀಠಾಧಿಪತಿ ಮೃತಪಟ್ಟಾಗ ಅಥವಾ ಇತರ ಕಾರಣಗಳಿಂದ ಅವರು ಪೀಠಾಧಿಪತಿಯಾಗಿ ಮುಂದುವರಿಯಲು ಸಾಧ್ಯವಾಗದಿದ್ದಾಗ, ಅದಕ್ಕೆ ಪೀಠಾಧಿಪತಿಯನ್ನು ನೇಮಕ ಮಾಡುವ ಎಲ್ಲ ಅಧಿಕಾರ ಮತ್ತೊಂದು ಮಠದ ಪೀಠಾಧಿಪತಿಗೆ ಇರುತ್ತದೆ” ಎಂದು ವಾದಿಸಿದರು ಎಂದು ಬಾರ್ ಎಂಡ್ ಬೆಂಚ್ ವರದಿ ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ