ಸರಕು-ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅತ್ಯವಶ್ಯ: ವಸಂತ ಲದ್ವಾ

ಹುಬ್ಬಳ್ಳಿ: ಕೇವಲ ರಾಜ್ಯ ಮತ್ತು ದೇಶದಲ್ಲಿ ವ್ಯಾಪಾರ ಮಾಡುವುದರಿಂದ ಅಭಿವೃದ್ಧಿಯಾಗುವುದು ಕಷ್ಟ. ಗುಣಮಟ್ಟದ ರಫ್ತು ಕೈಗೊಳ್ಳುವುದರ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸಿಕೊಳ್ಳುವುದು ಇಂದಿನ ವ್ಯಾಪಾರದಲ್ಲಿ ಅವಶ್ಯಕವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದ್ವಾ ಹೇಳಿದರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಸಹಯೋಗದಲ್ಲಿ ಆಜಾದಿಕಾ ಅಮೃತ ಮಹೋತ್ಸವ ವಾಣಿಜ್ಯ ಸಪ್ತಾಹದ ಅಂಗವಾಗಿ ಆಯೋಜಿಸಿದ ರಫ್ತುದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಪರಿಣಾಮದಿಂದ ಉದ್ದಿಮೆಗಳು ನೆಲಕಚ್ಚಿವೆ ಎಂದರು.
ರಾಜ್ಯದಿಂದ ಹಲವಾರು ಸೇವೆಗಳನ್ನು ರಫ್ತು ಮಾಡಲು ಇಂದಿಗೂ ನಾವು ಮುಂಬೈಗೆ ತೆರಳುವ ಅನಿವಾರ್ಯತೆ ಇದೆ. ಅದರ ಬದಲಿಗೆ ನಮ್ಮ ರಾಜ್ಯದ ನೈಸರ್ಗಿಕ ಬಂದರು ಆದ ಕಾರವಾರ ಬಂದರು ಉಪಯೋಗಿಸಿಕೊಳ್ಳಬೇಕು. ರಫ್ತು ಸಾಗಣೆ ಕಾರ್ಯಕ್ಕಾಗಿ ಅಂಕೋಲಾ ರೈಲು ಮಾರ್ಗ ಅಗತ್ಯವಾಗಿರುವುದರಿಂದ ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ಇದಕ್ಕೆ ಆದ್ಯತೆ ನೀಡಬೇಕು. ವಾಣಿಜ್ಯ ಮಂಡಳಿಯು ಪ್ರತಿ 6 ತಿಂಗಳಿಗೊಮ್ಮೆ ರಫ್ತಿನ ಬಗ್ಗೆ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಉದ್ದಿಮೆದಾರರು ರಫ್ತು ಮಾಡಬೇಕು ಎಂದರು.
ಕೆನ್ ಅಗ್ರಿಟೆಕ್ ವ್ಯವಸ್ಥಾಪಕ ನಿರ್ದೇಶಕ ವಿವೇಕ ಪಿ. ನಾಯಕ ಮಾತನಾಡಿ, ರಫ್ತು ಅಧಿಕಗೊಳಿಸಲು ಕೃಷಿಯ ಮೇಲೆ ಹೆಚ್ಚು ಗಮನ ಹರಿಸಬೇಕು. ಕೃಷಿ ಮತ್ತು ಆಹಾರ ಸಂಸ್ಕರಣೆ ವಿಭಾಗದಲ್ಲಿ ಜಿಲ್ಲೆ ಹೆಚ್ಚಿನ ರಫ್ತನ್ನು ಸಾಧಿಸಿದೆ. ರಾಜ್ಯದಲ್ಲಿ ಕೃಷಿ ಬೆಳೆಗೆ ಭೂಮಿ ಹಾಗೂ ಒಳ್ಳೆಯ ವಾತಾವರಣ ಇರುವುದರಿಂದ ರಫ್ತಿನಲ್ಲಿ ಮೇಲುಗೈ ಸಾಧಿಸಲು ಸಹಾಯಕವಾಗಿದೆ. ದೇಶದಲ್ಲಿ ಶೇ.80 ರಷ್ಟು ಕೃಷಿಕರು ಸಣ್ಣ ಮತ್ತು ಮಧ್ಯಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭೂರಹಿತ ರೈತರು ಕೃಷಿ ಕೆಲಸಗಳಲ್ಲಿ ಪರಿಣಿತಿ ಹೊಂದಿದ್ದು, ಅಂತಹ ರೈತರ ಕೌಶಲ್ಯಗಳನ್ನು ರಫ್ತಿಗಾಗಿ ಬಳಸಿಕೊಳ್ಳಬೇಕು. ಸುಸ್ಥಿರ ಆಹಾರ ಬೆಳೆಯ ಅಭಿವೃದ್ಧಿ ಪ್ರಾಮುಖ್ಯತೆ ನೀಡಬೇಕು. ಅಂದಾಗ ಬೀಜದಿಂದ ರಫ್ತಿನವರೆಗೆ ಅಭಿವೃದ್ಧಿ ಹೊಂದಲು ಸಾದ್ಯ. ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಳ್ಳೆಯ ಗುಣಮಟ್ಟದ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತಿದೆ. ಹೀಗೆ ರಫ್ತಿನ ಬೆಳೆಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿ ವ್ಯವಸಾಯ ಮಾಡಬೇಕು. ಕೃಷಿಯು ಎಲ್ಲ ಅಭಿವೃದ್ಧಿಗಳ ಕೀಲಿ ಇದ್ದಂತೆ, ಅದರ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಬೇಕು. ಕೃಷಿಕರಿಂದ ರಫ್ತುದಾರರವರೆಗೆ ಎಲ್ಲರೂ ಅವರ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುವುದರಿಂದ ರಫ್ತಿನ ಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ವಾಣಿಜ್ಯೋದ್ಯಮ ಮಂಡಳಿ ಅಧ್ಯಕ್ಷ ಮಹೇಂದ್ರ ಲದ್ದಡ ಮಾತನಾಡಿ, 2006 ರಲ್ಲಿ ರಾಜ್ಯದಲ್ಲಿ 8 ಲಕ್ಷ ಟನ್‌ಗಳಷ್ಟು ಹತ್ತಿ ಬೆಳೆಯಲಾಗುತ್ತಿತ್ತು. ಈ ಬೆಳೆ ಹೆಚ್ಚಿಸಲು ತೀರ್ಮಾನಿಸಿ ಸಭೆ ನಡೆಸಿ ರೈತರಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. 10 ವರ್ಷದ ಅಂತರದಲ್ಲಿ 2016 ಹೊತ್ತಿಗೆ 1 ಕೋಟಿ ಟನ್ ಹತ್ತಿ ಬೆಳೆಯುವಲ್ಲಿ ರಾಜ್ಯ ಯಶಸ್ಸು ಕಂಡಿದೆ. 2012 ರಿಂದ 14 ರ ವರೆಗೆ ಹಲವು ಬಗೆಯ ಹತ್ತಿಯನ್ನು ದೇಶದಲ್ಲಿ ಬೆಳೆಯಲಾಗಿದೆ. ಇಂದು ದೇಶದಿಂದ ಅತೀ ಹೆಚ್ಚು ಹತ್ತಿಯನ್ನು ರಫ್ತು ಮಾಡಲಾಗುತ್ತಿದೆ. ಇಂಡೋನೇಷ್ಯಾ ಮತ್ತು ಪಶ್ಚಿಮ ಬಂಗಾಳಗಳಿಗೆ 25 ಕ್ಕೂ ಹೆಚ್ಚು ವರ್ಷಗಳಿಂದ ಅವಿಭಜಿತ ಧಾರವಾಡ ಜಿಲ್ಲೆಯಿಂದ ಹತ್ತಿ ರಫ್ತಾಗುತ್ತಿತ್ತು. ಉತ್ತರ ಕರ್ನಾಟಕದ ಹವಾಮಾನವು ಆಹಾರ ಪದಾರ್ಥಗಳ ಬೆಳೆಗೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಂಬಾರು ಮಂಡಳಿ ವಿಜ್ಞಾನಿ ಬಿ.ಎ ವಾದಿರಾಜ ಮಾತನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಕೆಂದ್ರದ ಉಪನಿರ್ದೇಶಕ ಭೀಮಪ್ಪ ಎನ್.ಎಂ. ಡಿ.ಜಿ.ಎಫ್.ಟಿ ಸಹಾಯಕ ನಿರ್ದೇಶಕಿ ಗೀತಾ ಕೆ., ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ಅಶೋಕ ಗಡಾದ, ವಾಣಿಜ್ಯೋದ್ಯಮ ಮಂಡಳಿ ಮಾಜಿ ಅಧ್ಯಕ್ಷ ರಮೇಶ ಪಾಟೀಲ, ಮಂಡಳಿ ಉಪಾಧ್ಯಕ್ಷ ವಿನಯ ಜವಳಿ, ವಾಣಿಜ್ಯೋದ್ಯಮ ಸಂಸ್ಥೆ ಜಂಟಿ ನಿರ್ದೇಶಕ ಉಮೇಶ ಗಡಾದ, ಬ್ಯಾಂಕ್ ಆಫ್‌ ಬರೋಡಾ ವ್ಯವಸ್ಥಾಪಕ ಅಣ್ಣಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement