ಭುವನೇಶ್ವರ: ಬಂಗಾಳ ಕೊಲ್ಲಿಯ ಈಶಾನ್ಯ ಮತ್ತು ಪೂರ್ವ ಮಧ್ಯಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಒಡಿಶಾಗಳ ಕರಾವಳಿ ತೀರಗಳಲ್ಲಿ ಮುಂದಿನ 12 ಗಂಟೆಗಳ ಕಾಲ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದ್ದು, ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ಗುಲಾಬ್ (Cyclone Gulab) ಎಂದು ಹೆಸರಿಡಲಾಗಿದ್ದು, ಇದನ್ನು ಸೂಚಿಸಿದ್ದು ಪಾಕಿಸ್ತಾನ. ಗುಲಾಬ್ ಚಂಡಮಾರುತದ ವೇಗ ಗಂಟೆಗೆ 70-80 ಕಿಮೀ ಇರಲಿದ್ದು, 90 ಕಿಮೀ ವೇಗಕ್ಕೂ ಏರಬಹುದು ಎಂದು ಐಎಂಡಿ ಹೇಳಿದೆ.
ಗೋಪಾಲಪುರದ ಪೂರ್ವ- ಆಗ್ನೇಯ ದಿಕ್ಕಿನಲ್ಲಿ 510 ಕಿ.ಮೀ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣದಿಂದ 590 ಕಿ.ಮೀ ದೂರದಲ್ಲಿ ಶನಿವಾರ ಮುಂಜಾನೆ ವಾಯುಭಾರ ತೀವ್ರವಾಗಿ ಕುಸಿತಗೊಂಡಿದೆ. ಇದು ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಈ ಮಾರುತಗಳು ಪಶ್ಚಿಮ ದಿಕ್ಕಿಗೆ ಚಲಿಸಿ, ಆಂಧ್ರಪ್ರದೇಶದ ಉತ್ತರ ಭಾಗ ಮತ್ತು ಒಡಿಶಾದ ದಕ್ಷಿಣ ಭಾಗದ ಕರಾವಳಿಯನ್ನು ಅಪ್ಪಳಿಸಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಭಾನುವಾರ (ಸೆ.26) ವಿಶಾಖಪಟ್ಟಣಂ ಮತ್ತು ಗೋಪಾಲಪುರ ನಡುವೆ ಕಳಿಂಗಪಟ್ಟಣಂ ಸುತ್ತ ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ’ ಎಂದು ಇಲಾಖೆ ತಿಳಿಸಿದೆ. ಹಾಗೆಯೇ ಸೆಪ್ಟೆಂಬರ್ 28ರ ಹೊತ್ತಿಗೆ ಇನ್ನೊಂದು ಚಂಡಮಾರುತ ಏಳುವ ಮುನ್ಸೂಚನೆಯೂ ಗೋಚರಿಸುತ್ತಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ