ಕೆಎಲ್‌ಇ ಸಂಸ್ಥೆ ಬಿವಿಬಿ ಇಂಜಿನಿಯರಿಂಗ್‌ ಕಾಲೇಜಿಗೆ ವಜ್ರ ಮಹೋತ್ಸವದ ಸಂಭ್ರಮ, ಕೆಎಲ್ಇ ಟೆಕ್ ಪಾರ್ಕ್‌ ಉದ್ಘಾಟನೆ: ಸಂಸ್ಥೆ ನಡೆದುಬಂದ ದಾರಿಯ ಕಿರುನೋಟ

(ಇಂದು (೨೭-೦೯-೨೦೨೧) ಮುಂಜಾನೆ ೯.೦೦ ಗಂಟೆಗೆ ಬಿ.ವಿ.ಬಿ ವಜ್ರ ಮಹೋತ್ಸವದ ಆರಂಭ ಮತ್ತು ಕೆ.ಎಲ್.ಇ. ಟೆಕ್ ಪಾರ್ಕ್‌ ಉದ್ಘಾಟನೆ ಆಗಲಿದ್ದು, ಬಿ.ವಿ.ಭೂಮರೆಡ್ಡಿ ಕಾಲೇಜ್‌ ಆಫ್ ಇಂಜಿನಿಯರಿಂಗ್ ಕಾಲೇಜು ನಡೆದು ಬಂದ ದಾರಿ ಕುರಿತು ನಿವೃತ್ತ ಗ್ರಂಥಪಾಲಕರಾದ ಬಿ.ಎಸ್.‌ ಮಾಳವಾಡ ಲೇಖನ ಬರೆದಿದ್ದಾರೆ)

          ಬಿ.ವ್ಹಿ.ಭೂಮರೆಡ್ಡಿ
      ಡಾ. ಪ್ರಭಾಕರ ಬಿ. ಕೋರೆ
ಡಾ. ಅಶೋಕ ಶೆಟ್ಟರ

ಶಿಕ್ಷಣವು ಸಾಮಾಜಿಕ ಪ್ರಗತಿ, ಆರ್ಥಿಕ ಅಭಿವೃದ್ಧಿಗೆ ಮೂಲ ಎಂದು ಅರಿತ ಏಳು ಜನ ಯುವ ಶಿಕ್ಷಕರು ಮತ್ತು ಸಪ್ತರ್ಷಿಗಳೆಂದೆ ಖ್ಯಾತರಾದ ಎಸ್.ಎಸ್. ಬಸವನಾಳ, ಎಂ.ಆರ್. ಸಾಖರೆ, ಬಿ.ಬಿ. ಮಮದಾಪುರ, ಎಚ್.ಎಫ್.ಕಟ್ಟಿಮನಿ ಪಿ.ಆರ್. ಚಿಕ್ಕೋಡಿ, ಬಿ.ಎಸ್. ಹಂಚಿನಾಳ, ವಿ.ವಿ. ಪಾಟೀಲ ಮತ್ತು ಮೂರ ಜನ ಶಿಕ್ಷಣ ಪ್ರೇಮಿಗಳು ಮತ್ತು ಸಂಸ್ಥಾಪಕ ಸದಸ್ಯರಾದ ಸರದಾರ ವ್ಹಿ.ಜಿ. ನಾಯಕ ಬಹಾದೂರ ದೇಸಾಯಿ ಚಚಡಿ, ರಾವ ಬಹದ್ದೂರ ರುದ್ರಗೌಡ ಅರಟಾಳ,ರಾವಬಹಾದೂರ ವಿ.ಎ. ಅನಗೋಳ ಸೇರಿ ೧೯೧೬ರಲ್ಲಿ ಬಾಡಿಗೆ ಮನೆಯೊಂದರಲ್ಲಿ ಪ್ರಾಥಮಿಕ ಶಾಲೆಯೊಂದನ್ನು ಬೆಳಗಾವಿಯಲ್ಲಿ ಕೆ.ಎಲ್.ಇ. ಸಂಸ್ಥೆಯ ವತಿಯಿಂದ ಸ್ಥಾಪಿಸಿದರು.
ಇಂದು ಕೆ.ಎಲ್.ಇ. ಸಂಸ್ಥೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದು ಕೆ.ಜಿ.ಯಿಂದ ಪಿ.ಜಿಯ ವರೆಗೆ ಶೈಕ್ಷಣಿಕ ರಂಗದ ಎಲ್ಲ ಕ್ಷೇತ್ರಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ಬಗ್ಗೆಯ ಶಿಕ್ಷಣ ನೀಡುತ್ತಿದೆ. ಸದ್ಯ ಕೆ.ಎಲ್.ಇ. ಸಂಸ್ಥೆಯ ೨೭೦ ವಿವಿಧ ಸಂಸ್ಥೆಯಲ್ಲಿ ೧.೨೫ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ೭೦೦೦ ಹೆಚ್ಚಿನ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ತಂತ್ರಜ್ಞಾನ, ಸಾಮಾಜಿಕ ಕ್ಷೇತ್ರಗಳಲ್ಲಿ ಕ್ಷೇತ್ರದಲ್ಲಿ ಕೆಎಲ್‌ಇ ಸಂಸ್ಥೆಯು ಉತ್ತಮ ಸೇವೆಯನ್ನು ನೀಡುತ್ತಿದೆ.
ಹುಬ್ಬಳ್ಳಿಯಲ್ಲಿ ೧೯೪೭ರಲ್ಲಿ ಪ್ರಾರಂಭವಾದ ಬಿ.ವಿ. ಭೂಮರೆಡ್ಡಿ ಇಂಜಿನಿಯರಿಂಗ್‌ ಕಾಲೇಜು ಆಂಡ್‌ ಟೆಕ್ನಾಲಜಿಗೆ ಚಾರಿತ್ರಿಕ ಮಹತ್ವವಿದೆ. ಉತ್ತರ ಕರ್ನಾಟಕ ಮೊದಲನೆಯ ಇಂಜಿನಿಯರಿಂಗ್ ಕಾಲೇಜ್‌ ಮತ್ತು ಕರ್ನಾಟಕದ ಪ್ರಥಮ ಖಾಸಗಿ ಇಂಜಿನಿಯರಿಂಗ್ ಕಾಲೇಜು ಇದಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಯಾಗಬೇಕಾದರೆ ತಾಂತ್ರಿಕ    ಶಿಕ್ಷಣ ಅವಶ್ಯ ಎಂದು ತಿಳಿದ ಶಿಕ್ಷಣ ಪ್ರೇಮಿ ಉದ್ಯಮಿ ಬಿ.ವಿ. ಭೂಮರೆಡ್ಡಿ ಅಪಾರ ದೇಣಿಗೆ ನೀಡಿ ಕಾಲೇಜು ಪ್ರಾರಂಭಿಸಲು ಪ್ರೇರಕರಾದರು. ಹುಬ್ಬಳ್ಳಿಯ ವಿದ್ಯಾನಗರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ೫೬ ಎಕರೆ ನಿವೇಶನದಲ್ಲಿ ಇಂಜಿನಿಯರಿಂಗ್ ಕಾಲೇಜು ತಲೆ ಎತ್ತಿದೆ. ಆಕರ್ಷಕ ಕಟ್ಟಡಗಳು ಮತ್ತು ಉದ್ಯಾನ ಅಭಿವೃದ್ಧಿ ಹೊಂದುತ್ತಿದೆ. ಬ್ಯಾಂಕು, ಅಂಚೆ ಕಚೇರಿ, ಕ್ಯಾಂಟೀನ್, ಮುದ್ರಣಾಲಯ, ಸುಸಜ್ಜಿತ ಆಧುನೀಕರಣಗೊಂಡ ಗ್ರಂಥಾಲಯ, ವರ್ಗ ಕೋಣೆಗಳು, ಆಡಳಿತ ವಿಭಾಗಗಳು ಒಂದಕ್ಕಿಂತ ಒಂದು ವ್ಯವಸ್ಥಿತವಾಗಿವೆ.
ಕಾಲೇಜಿನಲ್ಲಿ ೧೨ಕ್ಕೂ ಹೆಚ್ಚಿನ ಸ್ನಾತಕ ಮತ್ತು ೮ಕ್ಕೂ ಹೆಚ್ಚಿನ ಸ್ನಾತಕೋತ್ತರ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಎಂಸಿಎಮತ್ತು ಎಂಬಿಎ ಕೋರ್ಸುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ೫೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ೩೦೦ಕ್ಕೂ ಹೆಚ್ಚಿನ ಬೋಧಕ ಸಿಬ್ಬಂದಿ ಮತ್ತು ೧೬೫ ಬೋಧಕೇತರ ಸಿಬ್ಬಂದಿ ದಕ್ಷತೆಯಿಂದ ಕಾರ್ಯನಿರ್ವ ಹಿಸುತ್ತಿದ್ದಾರೆ.
ಸಿಬ್ಬಂದಿಗೆ ಜ್ಞಾನದ ಆಧುನೀಕರಣಕ್ಕೆ ಹೆಚ್ಚು ಗಮನಕೊಟ್ಟು ಗುಣಾತ್ಮಕ ಶಿಕ್ಷಣ ತರಬೇತಿ ನೀಡುತ್ತಿರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮೌಲಿಕ ಮತ್ತು ಗುಣಾತ್ಮಕ ಬದಲಾವಣೆ ತರಲು ಸಾಧ್ಯವಾಗಿದೆ. ಇವುಗಳ ಜೊತೆಗೆ ಆವರಣ ಸಂದರ್ಶನಕ್ಕೆ ದೇಶದ ಪ್ರತಿಷ್ಠಿತ ಉದ್ದಿಮೆದಾರರು, ಬ್ಯಾಂಕಿನವರು, ಕಂಪನಿಗಳು ಸ್ಪರ್ಧಾತ್ಮಕ ಮನೋಭಾವನೆಯಿಂದ ಮುಂದೆ ಬರುತ್ತಿವೆ. ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಸಾಧ್ಯವಾಗಿದೆ. ಕಾಲೇಜಿನ ಗುಣಾತ್ಮಕ ನಿರ್ವಹಣೆ ವ್ಯವಸ್ಥೆಗೆ ೨೦೦೨ ರಲ್ಲಿ ಅಳವಡಿಸಲಾಗಿದೆ. ಐ.ಎಸ್.ಒ-೯೦೦೧ ಪ್ರಶಸ್ತಿ ೨೦೦೦ ರಲ್ಲಿ ಹಾಗೂ ೨೦೦೪ ರಲ್ಲಿ ಬಿ.ವಿ.ಕ್ಯೂ ಪ್ರಶಸ್ತಿ ಬಂದಿವೆ. ಕಾಲೇಜು ಸರ್ವವಿಧದಲ್ಲಿಯೂ ಶ್ರೇಷ್ಠತೆಯ ಗುಣಾತ್ಮಕ ಮೌಲ್ಯವರ್ಧಿತ ಪ್ರಶಸ್ತಿಗಳಿಗೆ ಭಾಜನವಾಗುತ್ತಿದೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಸಂಶೋಧನೆ ಕೈಕೊಳ್ಳಲು ಹೆಚ್ಚು ಆದ್ಯತೆ ನೀಡಲಾಗಿದೆ. ೪೦ ಜನ ಪಿಎಚ್.ಡಿ. ಸಂಶೋಧನೆಯಲ್ಲಿ ತೊಡಗಿದ್ದಾರೆ. ದೇಶದ ಪ್ರತಿಷ್ಠಿತ ಕಾಲೇಜು ಮತ್ತು ಕಂಪನಿ ಹಾಗೂ ಉದ್ಯಮಗಳ ಜೊತೆ ಸಹಕಾರದ ಒಪ್ಪಂದ ಮಾಡಿಕೊಂಡಿದೆ. ಕಾಲೇಜಿನಲ್ಲಿ ವಿವಿಧ ವಿಷಯಗಳ ಮೇಲೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಕಮ್ಮಟ, ಮೊದಲಾದವುಗಳನ್ನು ನಿರಂತವಾಗಿ ಆಯೋಜಿಸುತ್ತ ಬರಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನುಕೂಲವಾಗಿದೆ. ಹೊಸ ಬಗೆಯ ಆಧುನಿಕ ಜ್ಞಾನದ ಪರಿಚಯದೊಂದಿಗೆ ಅಧ್ಯಯನ ಕೈಕೊಳ್ಳಲು ಅನುಕೂಲವಾಗಿದೆ.
ಉತ್ತರ ಕರ್ನಾಟಕದ ಔದ್ಯೋಗಿಕ ಮತ್ತು ಆರ್ಥಿಕ ಪ್ರಗತಿಗೆ ಸರಕಾರ ಮತ್ತು ಸರಕಾರೇತರ ಸಂಘ ಸಂಸ್ಥೆಗಳಿಗೆ ಸಹಕರಿಸಿ ಕಾರ್ಯ ಮಾಡುತ್ತಿದೆ. ಜಾಗತೀಕರಣದ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತೆ ಕಾಲೇಜಿಗೆ ಸ್ವಾಯತ್ತತೆ ಸರಕಾರ ನೀಡಿದೆ.
ಕಾಲೇಜಿನ ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಗುಣಾತ್ಮಕ ಮತ್ತು ಶ್ರೇಷ್ಠತೆಯ ಶಿಕ್ಷಣ ಕೊಡಲು ಸಾಧ್ಯವಾಗುವ ಎಲ್ಲ ಪ್ರಯತ್ನಗಳು ಸಹ ಸಾಗಿದೆ. ಕಾಲೇಜಿನಲ್ಲಿ ಅನುಭವಿಕ ಪ್ರತಿಭಾವಂತ, ಸಂಕಲ್ಪ ಶಕ್ತಿಯುಳ್ಳ ಸಿಬ್ಬಂದಿ ತನ್ಮಯತೆಯಿಂದ ಕಾರ್ಯ ನಿರ್ವಹಿಸುತ್ತಿರುವರು. ವಿದ್ಯಾರ್ಥಿಗಳು ಪರಸ್ಪರವಾಗಿ ಪರಿಪೂರಕವಾಗಿ ಅಧ್ಯಯನ ಮಾಡಲು, ಚರ್ಚೆ, ಸಂವಾದ ಮಾಡಲು ಹೆಚ್ಚು ಅವಕಾಶ ಒದಗಿಸಿ ಬೋಧಕರು ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದ್ದಾರೆ.
ರಾಷ್ಟ್ರೀಯ ಇಂಜಿನಿಯರಿಂಗ್‌ ಪ್ರತಿಷ್ಠಾನದ ನಿಯಮಾವಳಿಗೆ ಅನುಸಾರವಾಗಿ ಗುಣಾತ್ಮಕ ಶಿಕ್ಷಣ ನೀಡಲು ಕಾಲೇಜ ತೊಡಗಿಸಿಕೊಂಡಿದೆ. ಜಾಣ್ಮೆಯ ಕೌಶಲ್ಯಗಳು ಅಳವಡಿಸಿಕೊಳ್ಳುವುದು, ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು, ಸಾಮಾಜಿಕ ಬದ್ಧತೆ, ಸಾಮೂಹಿಕ ಪ್ರಯತ್ನ, ಸಹಕಾರ ಮೊದಲಾದ ನಿಯಮಗಳನ್ನು ಶಿಕ್ಷಣದಲ್ಲಿ ಅಳವಡಿಸಿ ಕೊಳ್ಳುವಲ್ಲಿ ಕಾಲೇಜ ಮುಂಚೂಣಿಯಲ್ಲಿದೆ, ವಿದ್ಯಾರ್ಥಿಗಳಿಗೆ ಉತ್ತಮ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗಿದೆ.
ಡಾ.ಆರ್. ಎಚ್. ಕುಲಕರ್ಣಿ ಸ್ಮಾರಕ, ದೇಶಪಾಂಡೆ ಫೌಂಡೇಶನ್‌, ಖ್ಯಾತ ಉದ್ದಿಮೆದಾರರಾದ ರತನ್ ಟಾಟಾ ಅವರಿಂದ ಉದ್ಘಾಟನೆಗೊಂಡ ಮೆಕ್ಯಾನಿಕಲ್ ಮತ್ತು ಆಡಳಿತ ನಿರ್ವಹಣೆಯ ಭವ್ಯ, ವಿಶಾಲ ಮತ್ತು ಕಲಾತ್ಮಕವಾದ ಕಟ್ಟಡಗಳು ಕ್ಯಾಂಪಸ್ಸಿನ ಮೆರುಗನ್ನು ಹೆಚ್ಚಿಸಿವೆ. ಅತ್ಯಾಧುನಿಕ ಗ್ರಂಥಾಲಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಸೌಲಭ್ಯಗಳನ್ನು ಹೊಂದಿ, ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ದಾಖಲೆಯ ಕ್ಯಾಂಪಸ್ ಸಂದರ್ಶನಗಳ ಮೂಲಕ ವಿದ್ಯಾರ್ಥಿಗಳು ಯಶಸ್ಸಿನ್ನತ್ತ ಮುನ್ನಡೆಯುತ್ತಿದ್ದಾರೆ.
ಎ.ಎಸ್. ಮೆನನ್ , ಡಾ.ಬಿ.ಸಿ. ಖಾನಾಪುರೆ, ಡಾ. ವಿ.ಎಸ್. ದೋತ್ರದ, ಡಾ.ಎಸ್.ಎಸ್. ಮೂರ್ತಿ, ಮುಂತಾದವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, ಸದ್ಯ ಡಾ. ಪಿ.ಜಿ. ತೆವರಿ ಅವರು ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಾವಿದ್ಯಾಲಯ ಸಾರ್ವಜನಿಕ ಸಹಭಾಗಿತ್ವದಲ್ಲಿ ಹಲವಾರು ಸಂಶೋಧನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿದ್ದಾರೆ.
ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳಾದ ಡಾ. ಸುಧಾಮೂರ್ತಿ, ಡಾ. ಎ. ಸಹಸ್ರಬುದ್ದಿ, ವಿವೇಕ ಕುಲಕರ್ಣಿ, ಎಸ್. ಎಮ್. ಪಂಚಗಟ್ಟಿ, ಉಮೇಶ ವೈದ್ಯಮಠ, ಪ್ರದೀಪ ವಜ್ರರಾಮ, ಡಾ. ಎಸ್.ಎಸ್. ದೇಸಾಯಿ, ಪ್ರೊ. ನೋಜರ್ ಸಿಂಗ್ ಪೂರಾವ್, ಎಂ.ಕೆ. ರಾಜಮಾನೆ ಅಜಿತ ಪ್ರಭು, ಮುಂತಾದವರು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಾ ಕಾಲೇಜಿನ ಹಿರಿಮೆ ಹೆಚ್ಚಿಸಿದ್ದಾರೆ. ಸದ್ಯದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದಾರೆ. ಹಳೆಯ ವಿದ್ಯಾರ್ಥಿಗಳು ಇಂಜಿನಿಯರ್ ಆಗಿ, ತಾಂತ್ರಿಕ ಪರಿಣಿತರಾಗಿ, ಉದ್ದಿಮೆದಾರರಾಗಿ ದೇಶ, ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಸ್ಥೆ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬಿ. ಕೋರೆ ಹಾಗೂ ಅವರ ತಂಡದ ದೂರದರ್ಶಿತ್ವ ಮತ್ತು ಮಾರ್ಗದರ್ಶನಲ್ಲಿ ಸಂಸ್ಥೆಯು ತಾಂತ್ರಿಕ ಮತ್ತು ಅಭಿಯಾಂತ್ರಿಕ ಶಿಕ್ಷಣವನ್ನು ನೀಡುತ್ತ ಮುನ್ನಡೆಯುತ್ತಿದೆ. ಡಾ. ಅಶೋಕ ಶೆಟ್ಟರ ಅವರು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಬಂದ ನಂತರ ಭೂಮರೆಡ್ಡಿ ಇಂಜನೀಯರಿಂಗ ಕಾಲೇಜು ಪ್ರಗತಿ ಪಥದತ್ತ ಸಾಗುತ್ತಿದೆ.

ಪ್ರಮುಖ ಸುದ್ದಿ :-   ಬಾಬಾ ರಾಮದೇವ ಕಂಪನಿ ತಯಾರಿಸಿದ 14 ಔಷಧಗಳ ತಯಾರಿಕಾ ಪರವಾನಗಿ ಅಮಾನತು ಮಾಡಿದ ಉತ್ತರಾಖಂಡ ಸರ್ಕಾರ

-ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement