ಆರ್ ಆ್ಯಂಡ್ ಡಿ ಹೊಸನೀತಿ ರೂಪಿಸಲು ಕಾರ್ಯಪಡೆ ರಚನೆ, ಅಧ್ಯಕ್ಷರನ್ನಾಗಿ ಡಾ.ಅಶೋಕ ಶೆಟ್ಟರ್ ನೇಮಕಕ್ಕೆ ಚಿಂತನೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲ ರಂಗಗಳಲ್ಲಿ ಇಂದು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್ ಆ್ಯಂಡ್ ಡಿ ಕೇಂದ್ರಗಳಿದ್ದು, ಅವುಗಳಿಗೆ ಹೆಚ್ಚು ಮಹತ್ವ ನೀಡಲಾಗುವುದು. ಈ ಕ್ಷೇತ್ರಗಳಲ್ಲಿ ಆರ್ ಆ್ಯಂಡ್ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ದೇಶಿಸಿದ್ದು, ಹೊಸ ಆರ್ ಆ್ಯಂಡ್ ಡಿ ನೀತಿ ರಚನೆಗೆ ಕಾರ್ಯಪಡೆ ಅಧ್ಯಕ್ಷರನ್ನಾಗಿ ಕೆಎಲ್‌ಇ ತಾಂತ್ರಿಕ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಅಶೋಕ ಶೆಟ್ಟರ್ ಅವರ ನೇಮಕಕ್ಕೆ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75 ನೇ ವರ್ಷಾಚರಣೆ ಹಾಗೂ ಕೆಎಲ್‌ಇ ಟೆಕ್‌ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು.
ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಕೆಎಲ್‌ಇ ಟೆಕ್‌ಪಾರ್ಕಿನ ಅಭಿವೃದ್ಧಿಗೆ ಅಗತ್ಯವಾಗಿರುವ ಇನ್ನೂ 2 ಕೋಟಿ ರೂ.ಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಕ್ರೋಢೀಕರಿಸಿ ನೀಡಲಾಗುವುದು. ಸ್ಟಾರ್ಟ್ ಅಪ್‌ಗಳ ಉತ್ತೇಜನಕ್ಕಾಗಿ ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಪ್ರಾದೇಶಿಕ ಕಚೇರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ವಿದ್ಯೆ, ವ್ಯಕ್ತಿತ್ವ ನಿರ್ಮಾಣ ಮಾಡುವುದು ಸಂಸ್ಥೆಗಳು ಹಾಗೂ ಸರ್ಕಾರದ ಜವಾಬ್ದಾರಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸಂಸ್ಥೆಗೆ, ಸಮಾಜಕ್ಕೆ ಉತ್ತಮ ಮಾನವ ಸಂಪನ್ಮೂಲವಾಗಿ ಕೊಡುಗೆಗಳನ್ನು ಮರಳಿ ನೀಡಬೇಕು. ಕೆಎಲ್‌ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ವಿವಿಧ ಬಹು ಅಧ್ಯಯನ ಶಿಸ್ತುಗಳಲ್ಲಿ ಮಾದರಿಯಾಗಿ ರೂಪುಗೊಂಡಿದೆ. ಇಂದು ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಸಂಪೂರ್ಣ ಸ್ವರೂಪವೇ ಬದಲಾಗಿದೆ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ಅವರು, ತಮಗೆ ಕಲಿಸಿದ ಪ್ರಾಧ್ಯಾಪಕರು, ಹಿರಿಯ-ಕಿರಿಯ ಸಹಪಾಠಿಗಳನ್ನು, ಹಾಜರಾಗದ ಪ್ರಯೋಗಾಲಯಗಳು, ಪುಸ್ತಕ ಪಡೆಯದ ಗ್ರಂಥಾಲಯಗಳು, ಹಾಸ್ಟೇಲು, ಕ್ಯಾಂಪಸ್, ಕ್ಯಾಂಟೀನ್ ಎಲ್ಲವನ್ನೂ ವಿನೋದವಾಗಿ ನೆನಪಿಸಿಕೊಂಡರು.
ಮುಖ್ಯಮಂತ್ರಿಯಾಗಿ ಕೈಗೊಳ್ಳುವ ಎಲ್ಲಾ ಜನಪರ ಕಾರ್ಯಗಳಲ್ಲಿ ಬಿವಿಬಿ ಕಾಲೇಜು ಕಲಿಸಿದ ಪಾಠಗಳ ಪಾತ್ರ ಇರುತ್ತದೆ. ಆಡಳಿತದಲ್ಲಿ ತಾಂತ್ರಿಕತೆ, ವೈಜ್ಞಾನಿಕತೆ ತರಲು ಉತ್ಸುಕನಾಗಿದ್ದೇನೆ. ಪ್ರತಿ ಹಂತದಲ್ಲಿಯೂ ನನ್ನ ಜ್ಞಾನವನ್ನು ಪ್ರಸ್ತುತ ಸಂಶೋಧನೆಗಳೊಂದಿಗೆ ತಾಳೆ ಮಾಡಿ ಪರೀಕ್ಷಿಸಿಕೊಳ್ಳುತ್ತಿರುತ್ತೇನೆ.ಸಾರ್ವಜನಿಕ ಉಪಯೋಗ, ಸಂಕೇತಗಳ ರವಾನೆಗೆ ವೈರ್‌ಲೆಸ್ ತಂತ್ರಜ್ಞಾನ, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಸಾಫ್ಟವೇರ್ ಕ್ಷೇತ್ರಗಳ ಅತ್ಯಾಧುನಿಕ ವಿದ್ಯೆ, ಸಂಶೋಧನೆಗಳಲ್ಲಿ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ಮಹತ್ವದ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ರಾಜಕೀಯವೂ ಒಂದು ವಿಜ್ಞಾನವೇ ಆಗಿದೆ ಅಲ್ಲಿಯೂ ವೈಜ್ಞಾನಿಕ ವಿಧಾನಗಳಿವೆ. ತಾಂತ್ರಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳನ್ನು ರಾಜತಾಂತ್ರಿಕವಾಗಿ ಬಳಸುವುದು ರಾಜಕೀಯ ವಿಜ್ಞಾನವಾಗಿದೆ. ಎಲ್ಲಾ ದೇಶಗಳು ಈ ನೀತಿ ಪಾಲಿಸಬೇಕು‌. ಕರ್ತವ್ಯವನ್ನು ನೈತಿಕತೆಯ ತಳಹದಿಯೊಂದಿಗೆ ಕಾಯಕದ ರೀತಿಯಲ್ಲಿ ನಿರ್ವಹಿಸಬೇಕು.ದೇಶದ ಬಡತನ,ಆರೋಗ್ಯ,ಶಿಕ್ಷಣ,ಆರ್ಥಿಕ ಸವಾಲುಗಳನ್ನು ಅರಿಯಲು ನಾವು ಸದಾ ಕಾಲ ಜನರ ನಡುವೆ ಇರಬೇಕು,ಅದೇ ಜನರ, ಜನಪರ ರಾಜಕೀಯವಾಗಿದೆ.
ಪ್ರಧಾನಮಂತ್ರಿಗಳು ಸಕ್ಕರೆ ಕಾರ್ಖಾನೆಗಳಲ್ಲಿ ಇಥೆನಾಲ್ ಉತ್ಪಾದನೆಗೆ ಶೇ.20 ರಷ್ಟು ಅವಕಾಶ ನೀಡಿದ್ದಾರೆ. ಮುರುಗೇಶ್ ನಿರಾಣಿ ಇದರ ಸದುಪಯೋಗ ಪಡೆದವರಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಬೃಹತ್, ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ ಮಾತನಾಡಿ, ಕೆಎಲ್‌ಇ ಸಪ್ತರ್ಷಿಗಳ ಪ್ರಯತ್ನದಿಂದ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿಯಾಗಲು, ವಿಶೇಷವಾಗಿ ಮಹಿಳೆಯರು ತಾಂತ್ರಿಕ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. 3-4 ದಶಕಗಳ ಹಿಂದೆ ಕೇವಲ ಸುಮಾರು 500 ರಿಂದ 600 ವಿದ್ಯಾರ್ಥಿಗಳಿದ್ದ ಈ ಕಾಲೇಜು ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸುಮಾರು 6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಕೇವಲ ಉದ್ಯೋಗಿಗಳಾಗದೇ ಮತ್ತೊಬ್ಬರಿಗೆ ಕೆಲಸ ನೀಡುವ ಉದ್ಯಮಪತಿಗಳಾಗಬೇಕು .ಸರ್ಕಾರ ಅನೇಕ ಪ್ರೋತ್ಸಾಹಕ ಯೋಜನೆಗಳ ಪ್ರಯೋಜನ ಪಡೆಯಬೇಕು .ಅಕ್ಟೋಬರ್ 15 ರಿಂದ ನಿರಾಣಿ ಸಮೂಹ ಸಂಸ್ಥೆಗಳ ಉದ್ಯಮ ಘಟಕಗಳು ಪುನರಾರಂಭ ಮಾಡಲಿವೆ. ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ಸ್ಫೂರ್ತಿ ಪಡೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆ ಹಾಗೂ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರನ್ನು ಸನ್ಮಾನಿಸಲಾಯಿತು.ಸಚಿವರಾದ ಶಂಕರ್ ಪಾಟೀಲ ಮುನೇನಕೊಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಎಲ್‌ಇ ತಾಂತ್ರಿಕ ವಿವಿ ಉಪಕುಲಪತಿ ಡಾ.ಅಶೋಕ ಶೆಟ್ಟರ್ ಸ್ವಾಗತಿಸಿದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement