ಕರ್ನಾಟಕದ  ಆರು ನಗರಗಳಲ್ಲಿ ವಿಧಿವಿಜ್ಞಾನ  ಪ್ರಯೋಗಾಲಯಗಳ ಸ್ಥಾಪನೆ: ಬೊಮ್ಮಾಯಿ

ಹುಬ್ಬಳ್ಳಿ: ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ ,ಹುಬ್ಬಳ್ಳಿ-ಧಾರವಾಡ , ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ (ಎಫ್ ಎಸ್ ಎಲ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಈ ಕುರಿತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯ ಬಾಣತಿಕಟ್ಟೆಯಲ್ಲಿ ಕಸಬಾಪೇಟೆ ಪೊಲೀಸ್ ಠಾಣೆ , ದಕ್ಷಿಣ ಸಂಚಾರಿ ಠಾಣೆ, ಅಳ್ನಾವರ ಪೊಲೀಸ್ ಠಾಣೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಚೇರಿ ಮತ್ತು 36 ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಆಫೀಸರ್ ಆನ್ ಕ್ರೈಮ್ ಸೀನ್ ಅಧಿಕಾರಿಗಳನ್ನು ನೇಮಿಸಿಕೊಂಡು ಅವರಿಗೆ ಉನ್ನತ ಮಟ್ಟದ ಎಫ್ಎಸ್ಎಲ್ ತರಬೇತಿ ನೀಡಿ ಅಪರಾಧ ಕೃತ್ಯಗಳ ಸಾಕ್ಷ್ಯಾಧಾರ ನಾಶಕ್ಕೆ ಅವಕಾಶವಿಲ್ಲದೇ ಮಹಜರು ನಡೆಸಿ, ಪ್ರಯೋಗಾಲಯಕ್ಕೆ ಕಳುಹಿಸುವ ಕ್ರಮಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡಲಾಗುವುದು. ಪುಣೆಯ ಕಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್.ಡಿ.ಎ) ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳ ತರಬೇತಿಗಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ- ಧಾರವಾಡ ಸೇರಿ ರಾಜ್ಯದ ಆರು ಕಡೆಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಚಾರಿ ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗಿದೆ.ಆಫೀಸರ್ ಆನ್ ಕ್ರೈಂ ಸೀನ್ ಎನ್ನುವ ಕಲ್ಪನೆ ಆಧಾರದ ಮೇಲೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ.‌ 16 ಸಾವಿರ ಪೊಲೀಸ್ ಪೇದೆ ಹಾಗೂ ಸಬ್ ಇನ್ಸ್‌ಪೆಕ್ಟರುಗಳ ನೇಮಕಾತಿ ಮಾಡಲಾಗುತ್ತಿದೆ. ಮಧ್ಯಮ ಹಂತದ ಅಧಿಕಾರಿಗಳಿಗೆ ವಿಶೇಷ ತರಬೇತಿ ಅವಶ್ಯಕತೆ ಇದೆ ಎಂದರು.
ಪ್ರತಿ ವರ್ಷ ನೂರು ಠಾಣೆಗಳಂತೆ ಮುಂದಿನ ಐದು ವರ್ಷದಲ್ಲಿ 500 ಪೊಲೀಸ್ ಠಾಣೆ ನಿರ್ಮಿಸುವ ಗುರಿ ಇದೆ. 10 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಿಸಲಾಗುವುದು. ಶ್ವಾನಗಳ ತರಬೇತಿಗೆ ಡಾಗ್ ಕ್ಯಾನಲ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ನೆರೆಯ ದೇಶಗಳಲ್ಲಿ ಆಂತಕವಾದಿಗಳು ದೇಶದ ಆಡಳಿತ ನಡೆಸುವ ಮಟ್ಟಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಎಲ್ಲರೂ ಜಾಗೃತಿಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಎಂದು ಹೇಳಿದರು.
ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 21 ಕೋಟಿ ರೂ‌.ಗಳ ವೆಚ್ಚದಲ್ಲಿ ಪೋಲಿಸ್ ಠಾಣೆ, ಸಂಚಾರಿ ಠಾಣೆ, ವಸತಿ ಗೃಹಗಳನ್ನು ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಸರ್ಕಾರದಿಂದ ಒಂದು ವರ್ಷದಲ್ಲಿ 2 ಸಾವಿರ ಕೋಟಿ ರೂ.ವೆಚ್ಚದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗುವುದು. ಪೊಲೀಸ್ ಸಿಬ್ಬಂದಿಗೆ ಸದ್ಯ ಶೇ‌‌ 49. ರಷ್ಟು ವಸತಿ ಗೃಹಗಳಿವೆ. ಮುಂದಿನ ದಿನಗಳಲ್ಲಿ 10 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಾಣ ಮಾಡಲಾಗುವುದು. 250 ಜನ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ನೇಮಕ ಮಾಡಿಕೊಳ್ಳಲಾಗುವುದು. ಆನ್ ಲೈನ್ ಲಾಟರಿ ಹಾಗೂ ಜೂಜಿಗೆ ಇತಿಶ್ರೀ ಹಾಡಲು ಶಾಸನ ಸಭೆಯಲ್ಲಿ ಮಸೂದೆ ಪಾಸು ಮಾಡಲಾಗಿದೆ. ಇದನ್ನು ಕಾಗ್ನಿಜಿಬಲ್ ಪ್ರಕರಣ ಎಂದು ದಾಖಲಿಸಿಕೊಂಡು. ಜಾಮೀನು ರಹಿತವಾಗಿ ತನಿಖೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜೂಜಾಟ, ಆನ್ ಲೈನ್ ಜೂಜುಕಾರನ್ನು ಜೈಲಿಗೆ ತಳ್ಳಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲಿಯೇ ಇದು ಕಾಯ್ದೆಯಾಗಿ ಜಾರಿಗೆ ಬರಲಿದೆ. ಔರಾದಕರ್ ವರದಿ ಜಾರಿಗೆ ತರಲಾಗುತ್ತಿದೆ. ಪೊಲೀಸರಿಗೆ ಇದರಿಂದ ಅನುಕೂಲವಾಗಿದೆ. 52 ಇಂಜಿನಿಯರಿಂಗ್, ಪದವಿ ಹಾಗೂ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು ಪೊಲೀಸ್ ಇಲಾಖೆ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಅಗ್ನಿಶಾಮಕ ದಳ ಬಲಪಡಿಸಲಾಗುತ್ತಿದೆ. ವಿದೇಶದಿಂದ ಉಪಕರಣಗಳನ್ನು ತರಿಸಿಕೊಂಡು ಸಶಸ್ತ್ರ ಘಟಕ ಬಲಪಡಿಸಲಾಗುತ್ತಿದೆ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ, ರಾಜ್ಯ ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಉತ್ತರ ವಲಯ ಐಜಿಪಿ ಎನ್.ಸತೀಶಕುಮಾರ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಮತ್ತಿತರರಿದ್ದರು.

ಪ್ರಮುಖ ಸುದ್ದಿ :-   ಮೈಸೂರು: ಪಬ್‌ನಲ್ಲಿ ಭೀಕರ ಅಗ್ನಿ ಅನಾಹುತ; ಇಬ್ಬರುಸಜೀವ ದಹನ, ಹಲವರಿಗೆ ಗಾಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement