ಸರ್ಕಾರಿ ಕೊಠಡಿ ಕಾಣೆಯಾಗಿದೆ ಹುಡುಕಿಕೊಡಿ: ಪೊಲೀಸ್‌ ಠಾಣೆಗೆ ಬಂದ ಹೀಗೊಂದು ದೂರು…!

ಕೆ.ಆರ್.ಪೇಟೆ: ಕೃಷ್ಣರಾಜಪೇಟೆಯಲ್ಲಿ ಕೆಲ ವರ್ಷಗಳ ಹಿಂದೆ ನಿರ್ಮಿಸಿದ್ದ ಸರ್ಕಾರಿ ಕೊಠಡಿ ಕಾಣೆಯಾಗಿದೆ. ಹುಡುಕಿಕೊಡಿ ಎಂಬ ದೂರೊಂದು ಪೊಲೀಸ್‌ ಠಾಣೆಗೆ ಬಂದಿದೆ. ಈಗ ಕಾಣೆಯಾದ ಕಟ್ಟಡ ಹುಡುಕುವುದು ಹೇಗೆಂಬ ತಲೆನೋವು ಪೊಲೀಸರದ್ದು.
ಪುರಸಭೆ ಮಾಲೀಕತ್ವದ ಖಾಸಿಂ ಖಾನ್ ಸಮುದಾಯ ಭವನದಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಹೆಚ್ಚುವರಿಯಾಗಿ ನಿರ್ಮಾಣ ಮಾಡಿದ್ದ ಕಟ್ಟಡ ಕಾಣೆಯಾಗಿದ್ದು. ಅಧಿಕಾರಿಗಳು ತಕ್ಷಣ ಪತ್ತೆಮಾಡಿ ಸಾರ್ವಜನಿಕರ ಸೇವೆಗೆ ನೀಡಬೇಕು ಎಂಬುದು ಸಮಾಜ ಸೇವಕ ಎಚ್.ಬಿ.ಮಂಜುನಾಥ್ ದೂರು ನೀಡಿದ್ದಾರೆ ಎಂದು ಆಂದೋಲನ.ಇನ್‌ ವರದಿ ಮಾಡಿದೆ.
ವರದಿ ಪ್ರಕಾರ, ಪಟ್ಟಣದ ಹಳೇ ಮೈಸೂರು ರಸ್ತೆಯಲ್ಲಿರುವ ಪುರಸಭೆ ಮಾಲೀಕತ್ವದ ಖಾಸಿಂ ಖಾನ್ ಸಮುದಾಯ ಭವನದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲು ರಾಜ್ಯಸಭಾ ಸದಸ್ಯರಾಗಿದ್ದ ರೆಹಮಾನ್‌ಖಾನ್ ಅವರು ತಮ್ಮ ಅನುದಾನದಲ್ಲಿ 85 ಲಕ್ಷ ರೂ. ಬಿಡುಗಡೆ ಮಾಡಿದ್ದರು. ಅದರಂತೆ ಮಂಡ್ಯ ಜಿಲ್ಲಾಧಿಕಾರಿಗಳು ಕಾಮಗಾರಿಯನ್ನು ಕೈಗೊಳ್ಳುವಂತೆ (ಪತ್ರ ಸಂಖ್ಯೆ ಎಂಪಿಜಿ 03/2017-18) 28.07.2018 ರಂದು ಮಂಡ್ಯದ ನಿರ್ಮಿತಿ ಕೇಂದ್ರಕ್ಕೆ ಆದೇಶ ನೀಡಿದ್ದರು.
ಆದೇಶದಂತೆ ಕಾಮಗಾರಿ ಆರಂಭಿಸಿದ್ದ ನಿರ್ಮಿತಿ ಕೇಂದ್ರದವರು ಹೆಚ್ಚುವರಿ ಕೊಠಡಿಯನ್ನು ಕೇವಲ 40,95,116 ರೂ.ಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಿರುವುದನ್ನು ಮಂಡ್ಯ ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರು ಈ ಹಿಂದೆ ಪಾಂಡವಪುರ ಉಪವಿಭಾಗಾಧಿಕಾರಿಗಳಾಗಿದ್ದ ಸಮಯದಲ್ಲಿ 27.04.2019 ರಂದು ಖುದ್ದು ಖಾಸಿಂ ಖಾನ್ ಸಮುದಾಯ ಭವನಕ್ಕೆ ಭೇಟಿ ನೀಡಿ ಕಾಮಗಾರಿ ಖಾತರಿ ಪಡಿಸಿಕೊಂಡಿದ್ದರು. ಅಂದಾಜು ಪಟ್ಟಿಯಂತೆ ಕಾಮಗಾರಿ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡಬಹುದಾಗಿದೆ ಎಂದು 03.05.2019 ರಂದು ಮಂಡ್ಯ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಿಗೆ ವರದಿ ನೀಡಿದ್ದಾರೆ. 06.03.2020 ರಂದು ಪೂರ್ಣಗೊಂಡಿದ್ದ ಹೆಚ್ಚುವರಿ ಕಟ್ಟಡವನ್ನು ಯೋಜನಾ ವ್ಯವಸ್ಥಾಪಕರು ಕೆ.ಆರ್.ಪೇಟೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸುಸ್ಥಿತಿಯಲ್ಲಿ ಹಸ್ತಾಂತರ ಮಾಡಿದ್ದಾರೆ.
ಕೆ.ಆರ್.ಪೇಟೆ ಪುರಸಭೆಯ ಮುಖ್ಯಾಧಿಕಾರಿಗಳೂ ಹೆಚ್ಚುವರಿ ಕಟ್ಟಡವನ್ನು ಪರಿಶೀಲನೆ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಈಗ ಸರ್ಕಾರಿ ಅಧಿಕಾರಿಗಳ ಹೇಳಿಕೆ ಹಾಗೂ ಇರುವ ದಾಖಲೆಯಂತೆ ಖಾಸಿಂ ಖಾನ್ ಸಮುದಾಯ ಭವನದಲ್ಲಿ ಹೆಚ್ಚುವರಿಯಾಗಿ ನಿರ್ಮಾಣ ಮಾಡಿದ್ದ ಕಟ್ಟಡ ಈಗ ಕಾಣುತ್ತಿಲ್ಲ. ಅದನ್ನು ಹುಡುಕಿಕೊಡಿ ಎಂದು ಮಂಜುನಾಥ ದೂರು ನೀಡಿದ್ದಾರೆ ಎಂದು ಮಂಜುನಾಥ ಹೇಳಿದ್ದಾರೆ.
ಕಟ್ಟಡ ವಿಚಾರವಾಗಿ ಹಾಲಿ ಅಧ್ಯಕ್ಷರಿಗೂ ಲಿಖಿತವಾಗಿ ದೂರು ನೀಡಿದ್ದೇನೆ. ಅವರೂ ಸೂಕ್ತ ಕಟ್ಟಡವನ್ನು ಇದುವರೆಗೂ ಹುಡುಕುವ ಪ್ರಯತ್ನ ಮಾಡಿಲ್ಲ. ಹೆಚ್ಚುವರಿ ಕಟ್ಟಡ ಕಾಣುತ್ತಿಲ್ಲ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಲ್ಲಿ 40 ಲಕ್ಷ ರೂ.ಗೂ ಹೆಚ್ಚು ಹಣ ಖರ್ಚು ಮಾಡಿ ನಿರ್ಮಾಣ ಮಾಡಿರುವ ಹೆಚ್ಚುವರಿ ಕಟ್ಟಡ ಎಲ್ಲಿದೆ ಎಂಬುದನ್ನು ಅಧಿಕಾರಿಗಳು ಪತ್ತೆಮಾಡಬೇಕು ಎಂದು ಸಮಾಜ ಸೇವಕ ಮಂಜುನಾಥ ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement