ಬೆಂಗಳೂರಿಗೆ ಬಂತು ಮೊದಲ ಎಲೆಕ್ಟ್ರಿಕ್ ಬಸ್, ಸಾರಿಗೆ ಸಚಿವರ ಸಂಚಾರ

ಬೆಂಗಳೂರು: ಕರ್ನಾಟಕಕ್ಕೆ ಮೊದಲ ಎಲೆಕ್ಟ್ರಿಕ್ ಬಸ್ ಬೆಂಗಳೂರು ನಗರಕ್ಕೆ ಬಂದಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 90 ಮಿನಿ ಬಸ್‌ಗಳನ್ನು ಓಡಿಸಲು ಬಿಎಂಟಿಸಿ ಮುಂದಾಗಿದೆ.
ಜೆಬಿಎಂ ಕಂಪನಿಯಿಂದ ಬಿಎಂಟಿಸಿ ಗುತ್ತಿಗೆ(ಜಿಸಿಸಿ) ಆಧಾರದಲ್ಲಿ ಬಸ್ ಪಡೆದುಕೊಳ್ಳುತ್ತಿದೆ. ಎನ್ ಟಿಪಿಸಿ ಸಹಯೋಗದಲ್ಲಿ ಸೇವೆ ಒದಗಿಸಲು ಒಪ್ಪಂದ ‌ಮಾಡಿಕೊಳ್ಳಲಾಗಿದೆ.
ಬೆಂಗಳೂರಿಗೆ ಬಂದ ಮೊದಲ ಬಸ್ಸಿನ ಪರೀಕ್ಷಾರ್ಥ ಸಂಚಾರವನ್ನು ಬಿಎಂಟಿಸಿಯ ಕೆಂಗೇರಿ ಘಟಕದೊಳಗೇ‌ ನಡೆಸಲಾಯಿತು. ಇಂದು 10.30ಕ್ಕೆ ಎಲೆಕ್ಟ್ರಿಕ್ ಬಸ್ ಸೇವೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಸಾರಿಗೆ ಸಚಿವ ಶ್ರೀರಾಮುಲು ಕೆಂಗೇರಿ ಬಸ್​​ ನಿಲ್ದಾಣದಲ್ಲಿ ಎಲೆಕ್ಟ್ರಿಕ್​ ಬಸ್​​ಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಸಾರಿಗೆ ಸಚಿವ ಶ್ರೀರಾಮುಲು, ಬಿಎಂಟಿಸಿ ಅಧ್ಯಕ್ಷ ‌ನಂದೀಶ್ ರೆಡ್ಡಿ,ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್, ಸಾರಿಗೆ ಇಲಾಖೆ‌ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.‌ಅನ್ಬುಕುಮಾರ್ ಬಸ್ ನಲ್ಲಿ ‌ಸಂಚರಿಸಿದರು.
ಎನ್‌ಟಿಪಿಸಿ ಮತ್ತು ಜೆಬಿಎಂ ಆಟೋ ಕಂಪೆನಿಗಳು ಜಂಟಿಯಾಗಿ 9 ಮೀಟರ್ ಉದ್ದದ 90 ನಾನ್-ಎಸಿ ಎಲೆಕ್ಟ್ರಿಕ್ ಬಸ್‌(Non AC Electric bus)ಗಳನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿವೆ. 34 ಆಸನಗಳ ಈ ಬಸ್ ನಲ್ಲಿ ಎರಡು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಬಸ್ಸಿನಲ್ಲಿ ಸಿಸಿಟಿವಿ ಕ್ಯಾಮರಾ, ಪ್ಯಾಸೆಂಜರ್‌ ಡಿಸ್‌ಪ್ಲೇ ಬೋರ್ಡ್‌, ಅಂಗವಿಕಲರ ಪ್ರವೇಶಕ್ಕೆ ರಾರ‍ಯಂಪ್‌, ಪ್ಯಾನಿಕ್‌ ಬಟನ್‌ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಆರು ಬ್ಯಾಟರಿಗಳ ಸಹಾಯದಲ್ಲಿ ಬಸ್ ಸಂಚರಿಸಲಿದೆ. ಒಮ್ಮೆ ಚಾರ್ಜ್ ಮಾಡಿದರೆ 120 ಕಿಲೋ ಮೀಟರ್ ಸಂಚರಿಸುವ ಸಾಮರ್ಥ್ಯವನ್ನು ಬ್ಯಾಟರಿ ಹೊಂದಿದೆ.
ನವೆಂಬರ್‌ 1ರಂದು ಕರ್ನಾಟಕ ರಾಜ್ಯೋತ್ಸವದಂದು 10 ಬಸ್‌ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲಾ 90 ಬಸ್‌ಗಳು ರಸ್ತೆಗೆ ಇಳಿಯಲಿವೆ. ಎರಡನೇ ಹಂತದಲ್ಲಿ 300 ಬಸ್‌ಗಳು ಇನ್ನು ಆರು ತಿಂಗಳಲ್ಲಿ ರಸ್ತೆಗೆ ಇಳಿಯಲಿವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು.
ಈ ಎಲೆಕ್ಟ್ರಿಕ್ ಬಸ್‌ಗಳನ್ನು ಮುಖ್ಯವಾಗಿ ಈ ಮೆಟ್ರೋ ನಿಲ್ದಾಣಗಳಲ್ಲಿ ಬರುವಂತಹ ಪ್ರಯಾಣಿಕರಿಗೆ ಬೇರೆ ಏರಿಯಾಗಳಿಗೆ ಪ್ರಯಾಣಿಸಲು ಅನುಕೂಲವಾಗಲು ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್‌ಗಳಲ್ಲಿ ನಿರ್ವಾಹಕರಿದ್ದು ಮತ್ತು ಚಾಲಕರನ್ನು ಎನ್‌ಟಿಪಿಸಿ ಮತ್ತು ಜೆಬಿಎಂ ಅವರೇ ನಿಯೋಜಿಸಲಿದ್ದು, ಈ ಬಸ್‌ಗಳ ನಿರ್ವಹಣೆಯನ್ನೂ ಇವರೇ ಮಾಡಲಿದ್ದಾರೆ. ಈ ಬಸ್‌ಗಳನ್ನು 12 ವರ್ಷಗಳ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದು, ಬಿಎಂಟಿಸಿ ಪ್ರತಿ ಕಿಲೋ ಮೀಟರ್ ಆಧರಿಸಿ ಅವರಿಗೆ ಹಣ ನೀಡಲಿದ್ದಾರೆಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಉಚ್ಚಾಟನೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement