ಮಗುವಿನೊಂದಿಗೆ ನದಿಗೆ ಹಾರಿದ್ದ ತಾಯಿ ಜೀವಂತವಾಗಿ ಪತ್ತೆ, ಮಗುವಿಗಾಗಿ ಮುಂದುವರಿದ ಶೋಧ

ಗದಗ: ಮೂರು ವರ್ಷದ ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ರೋಣ ತಾಲ್ಲೂಕಿನ ಹೊಳೆಆಲೂರ ಗ್ರಾಮದ ಮಹಿಳೆ ನದಿಯಲ್ಲಿರುವ ಮುಳ್ಳು ಕಂಟಿಯಲ್ಲಿ ಜೀವಂತ ಪತ್ತೆಯಾಗಿದ್ದಾರೆ. ಆದರೆ ಮೂರು ವರ್ಷದ ಮಗು ಸಿಕ್ಕಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಉಮಾದೇವಿ ಸಂಗಮೇಶ ಶೆಲ್ಲಿಕೇರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರು. ಅವರಿಗೆ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಮೂರು ವರ್ಷದ ಮಗುವಿನೊಂದಿಗೆ ನದಿಗೆ ಹಾರಿದ್ದ ಅವರು ತೇಲಿಹೋಗಿ ಮುಳ್ಳುಕಂಟೆಯಲ್ಲಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳದ ಶೋಧ ಕಾರ್ಯಾಚರಣೆ ವೇಳೆ ನಿನ್ನೆ (ಬುಧವಾರ ಸಂಜೆ) ಪತ್ತೆಯಾಗಿದ್ದಾರೆ.
ಬುಧವಾರ ಬೆಳಿಗ್ಗೆ ಮನೆಯಲ್ಲಿದ್ದ ಮೂವರು ಹೆಣ್ಣು ಮಕ್ಕಳೊಂದಿಗೆ ಬಾದಾಮಿ ರಸ್ತೆ ಮಾರ್ಗದಲ್ಲಿ ಹರಿಯುವ ಮಲಪ್ರಭಾ ನದಿಯ ಸೇತುವೆಗೆ ಬಂದಿದ್ದ ಅವರು, ಆರಂಭದಲ್ಲಿ 3 ವರ್ಷದ ಮಗು ಶ್ರೇಯಾಳನ್ನು ನೀರಿಗೆ ಎಸೆದಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಕಂಡು ಉಳಿದ ಇಬ್ಬರು ಹೆಣ್ಣು ಮಕ್ಕಳು ತಾಯಿಯ ಕೈಯಿಂದ ತಪ್ಪಿಸಿಕೊಂಡು ಓಡಿದ್ದಾರೆ. ನಂತರ ಮಹಿಳೆ ಸೇತುವೆ ಬಳಿ ತನ್ನ ಸೀರೆ ಬಿಟ್ಟು ನದಿಗೆ ಹಾರಿದರು ಎಂದು ತಾಯಿಯಿಂದ ತಪ್ಪಿಸಿಕೊಂಡು ಬಂದ ಮಕ್ಕಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ನಂತರ ಗ್ರಾಮಸ್ಥರು ಸಂಬಂಧಸಿದವರಿಗೆ ಮಾಹಿತಿ ನೀಡಿದ್ದಾರೆ.
ಗದಗ- ರೋಣ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೋಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಮುಳ್ಳುಕಂಟೆಯಲ್ಲಿ ಸಿಲುಕಿ ಜೀವಂತವಾಗಿದ್ದರು. ಮಹಿಳೆಯನ್ನು ರಕ್ಷಣೆ ಮಾಡಿ ರೋಣ ತಾಲ್ಲೂಕು ಆಸ್ಪತ್ರೆಗೆ ಕಳುಹಿಸಲಾಗಿದೆ.
ಅನುದಾನಿತ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯ ಪತಿ 6 ತಿಂಗಳ ಹಿಂದೆ ಕೋವಿಡ್‌ನಿಂದ ಮೃತಪಟ್ಟಿದ್ದರು. ಮಹಿಳೆ ಈಚೆಗೆ ಮನೆ ಕಟ್ಟಿಸುವ ಕಾರ್ಯದಲ್ಲಿ ತೊಡಗಿದ್ದರು. ಸಾಲಬಾಧೆಯಿಂದ ಮಹಿಳೆ ಮನನೊಂದು ಆತ್ಮಹತ್ಯೆ ನಿರ್ಧಾರ ಕೈಗೊಂಡಿರಬಹುದು ಎಂಬಶಂಕೆ ವ್ಯಕ್ತಪವಾಗಿದೆ.
ಬುಧವಾರ ರಾತ್ರಿವರೆಗೆ ಕಾರ್ಯಾಚರಣೆ ನಡೆಸಿದರೂ ಮೂರು ವರ್ಷದ ಮಗುವಿನ ದೇಹ ಸಿಕ್ಕಿಲ್ಲ. ಗುರುವಾರವೂ ಶೋಧ ಕಾರ್ಯ ಮುಂದುವರಿಯಲಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement