ಸೀರೆ ಧರಿಸಿದವರಿಗೆ ಪ್ರವೇಶವಿಲ್ಲ ಎಂದಿದ್ದ ದೆಹಲಿ ರೆಸ್ಟೋರೆಂಟಿಗೆ ಬಂದ್‌ ಮಾಡುವಂತೆ ಎಸ್‌ಡಿಎಂಸಿಯಿಂದ ನೊಟೀಸ್‌..!

ನವದೆಹಲಿ: ಸಾಂಪ್ರದಾಯಿಕವಾಗಿ ಸೀರೆ ಧರಿಸಿದ್ದ ಕಾರಣಕ್ಕೆ ಮಹಿಳೆಯೊಬ್ಬರಿಗೆ ಪ್ರವೇಶವನ್ನು ನಿರಾಕರಿಸಿದ್ದ ಆರೋಪದಲ್ಲಿ ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ದೆಹಲಿಯ ಆಗಸ್ಟ್‌ ಕ್ರಾಂತಿ ಮಾರ್ಗದಲ್ಲಿದ್ದ ಅಕ್ವಿಲಾ ದೆಹಲಿ ರೆಸ್ಟೋರೆಂಟ್‌ ಪರವಾನಗಿ ಇಲ್ಲದ ಕಾರಣಕ್ಕೆ ಈಗ ಬಂದ್‌ ಆಗಿದೆ ಎಂದು ವರದಿಯಾಗಿದೆ.
“ಸಾಂಪ್ರದಾಯಿಕವಾಗಿ ಸೀರೆ ಧರಿಸಿದ್ದ ಕಾರಣಕ್ಕೆ ತನಗೆ ದೆಹಲಿಯ ಅಕ್ವಿಲಾ ರೆಸ್ಟೋರೆಂಟಿನಲ್ಲಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ,” ಎಂದು ಮಹಿಳೆಯೊಬ್ಬರು ಆರೋಪ ಮಾಡಿದ್ದರು. ಇದಕ್ಕೆ ಮಹಿಳೆ ಪ್ರಶ್ನೆ ಮಾಡಿದ್ದಕ್ಕೆ ರೆಸ್ಟೋರೆಂಟ್‌ನ ಮಹಿಳಾ ಸಿಬ್ಬಂ “ಮೇಡಮ್‌ ನಾವು ಇಲ್ಲಿ ಸ್ಮಾರ್ಟ್ ಕ್ಯಾಷುವಲ್ಸ್‌ ಧರಿಸಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ. ಸೀರೆಯು ಸ್ಮಾರ್ಟ್ ಕ್ಯಾಷುವಲ್ಸ್‌ ಅಲ್ಲ,” ಎಂದು ಹೇಳಿದ್ದರು.
ಈ ವಿಡಿಯೋವನ್ನು ಟ್ವೀಟ್‌ ಮಾಡಿರುವ ಅನಿತಾ ಚೌಧರಿ “ಭಾರತೀಯ ಸೀರೆಯು ಸ್ಮಾರ್ಟ್ ಕ್ಯಾಷುವಲ್ಸ್‌ ಅಲ್ಲ ಎಂಬ ಕಾರಣಕ್ಕೆ ದೆಹಲಿಯ ಅಕ್ವಿಲಾ ರೆಸ್ಟೋರೆಂಟ್‌ನಲ್ಲಿ ಸೀರೆ ಉಟ್ಟವರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಹಾಗಾದರೆ ಈ ಸ್ಮಾರ್ಟ್ ಕ್ಯಾಷುವಲ್ಸ್‌ ಎಂದರೆ ಏನು ಎಂಬುವುದನ್ನು ಈಗ ನೀವು ನಮಗೆ ಹೇಳಬೇಕು. ದಯವಿಟ್ಟು ಸ್ಮಾರ್ಟ್ ಕ್ಯಾಷುವಲ್ಸ್‌ ಎಂದರೆ ಏನು ಎಂದು ಹೇಳಿ, ಬಳಿಕ ನಾನು ಸೀರೆಯನ್ನು ಉಡುವುದನ್ನು ನಿಲ್ಲಿಸುತ್ತೇನೆ,” ಎಂದು ಹೇಳಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ದೆಹಲಿಯ ಈ ರೆಸ್ಟೋರೆಂಟ್‌ ವಿರುದ್ದ ಅನೇಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಈಗ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ದೆಹಲಿಯ ಆಗಸ್ಟ್‌ ಕ್ರಾಂತಿ ಮಾರ್ಗದಲ್ಲಿ ಇರುವ ಈ ಅಕ್ವಿಲಾ ರೆಸ್ಟೋರೆಂಟ್‌ನ್ನು ಮುಚ್ಚಿಸಿದೆ ಎಂದು ಹೇಳಲಾಗಿದೆ. “ಸರಿಯಾಗಿ ಪರವಾನಗಿ ಇಲ್ಲದ ಕಾರಣದಿಂದಾಗಿ ರೆಸ್ಟೋರೆಂಟ್‌ ಮುಚ್ಚಿಸಲಾಗಿದೆ,” ಎಂದು ಮಾಲೀಕರು ತಿಳಿಸಿದ್ದಾರೆ ಎಂದು ವರದಿಗಳು ಹೇಳಿದೆ.
ಈ ಬಗ್ಗೆ ಮಾಧ್ಯಮಕ್ಕೆ ಬುಧವಾರ ಮಾಹಿತಿ ನೀಡಿರುವ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಮ್‌ಸಿ) ಅಧಿಕಾರಿಗಳು, “ಸರಿಯಾದ ಪರವಾನಗಿ ಇಲ್ಲದೆಯೇ ಕಾರ್ಯನಿರ್ವಹಣೆ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿಯ ಈ ಹೊಟೇಲ್‌ ಮುಚ್ಚುವಂತೆ ನೊಟೀಸ್‌ ನೀಡಲಾಗಿದೆ,” ಎಂದು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್‌ 24 ರಂದು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನೊಟೀಸ್‌ ನೀಡಿದೆ. ಈ ನೊಟೀಸ್‌ನಲ್ಲಿ, ತಪಾಸಣೆಯ ಸಮಯದಲ್ಲಿ ಈ ರೆಸ್ಟೋರೆಂಟ್‌ಗೆ ಸರಿಯಾದ ವ್ಯಾಪಾರದ ಪರವಾನಗಿ ಇಲ್ಲದಿರುವುದು ಕಂಡುಬಂದಿದೆ. ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹಾಗೂ ಸಾರ್ವಜನಿಕ ಭೂಮಿಯನ್ನು ಅತಿಕ್ರಮಣ ಮಾಡಿ ಈ ರೆಸ್ಟೋರೆಂಟ್‌ ನಿರ್ಮಾಣ ಮಾಡಲಾಗಿದೆ ಎಂದು ಕೂಡಾ ತಿಳಿದು ಬಂದಿದೆ ಎಂದು ಅದು ಹೇಳಿದೆ.
ಈ ನೋಟಿಸ್ ಸ್ವೀಕರಿಸಿದ 48 ಗಂಟೆಗಳಲ್ಲಿ ವ್ಯಾಪಾರವನ್ನು ಮುಚ್ಚಲು ನಿಮಗೆ ನಿರ್ದೇಶಿಸಲಾಗಿದೆ. ವಿಫಲವಾದರೆ ನಾವು ರೆಸ್ಟೋರೆಂಟ್‌ ಅನ್ನು ನೇರವಾಗಿ ವಶಕ್ಕೆ ಪಡೆಯುತ್ತೇವೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ.
ಇದಕ್ಕೆ ಸೆಪ್ಟೆಂಬರ್‌ 27 ರಂದು ಪ್ರತಿಕ್ರಿಯೆ ನೀಡಿರುವ ಈ ರೆಸ್ಟೋರೆಂಟ್‌ ಮಾಲೀಕರು, “ನೊಟೀಸ್‌ ನೀಡಿದ ಕೂಡಲೇ ನಾನು ವ್ಯಾಪಾರವನ್ನು ಕೂಡಲೇ ಬಂದ್‌ ಮಾಡಿದ್ದೇವೆ. ಆರೋಗ್ಯದ ದೃಷ್ಟಿಯಿಂದ ಎಸ್‌ಡಿಎಂಸಿ ನೀಡುವ ಟ್ರೇಡ್ ಲೈಸೆನ್ಸ್ ಇಲ್ಲದೆ ಯಾವುದೇ ರೆಸ್ಟೋರೆಂಟ್‌ ನಡೆಯಲು ಸಾಧ್ಯವಿಲ್ಲ. ಅದರಿಂದಾಗಿ ಭವಿಷ್ಯದಲ್ಲಿ ತೊಂದರೆ ಉಂಟು ಆಗಬಹುದು,” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement