ಬೆಂಗಳೂರು: ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ಪುನರಾರಂಭ ಮಾಡುವ ಕುರಿತು ಹಬ್ಬಗಳು ಮುಗಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಆತುರದಲ್ಲಿ ಪುನರಾರಂಭಿಸಿಲ್ಲ. ಪೋಷಕರು ಹಾಗೂ ತಜ್ಞರೊಂದಿಗೆ ಚರ್ಚಿಸಿದ ನಂತರವೇ ಹಂತಹಂತವಾಗಿ ತೆರೆಯಲಾಗುತ್ತಿದೆ ಎಂದು ಅವರು ತಿಳಿಸಿದರು.
ಮೊದಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಸಭೆ ನಡೆಸಿದ ನಂತರ ರಾಜ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಯಿತು. ನಂತರ ಪಿಯು ತರಗತಿಗಳನ್ನು ಹಾಗೂ 9-12, 6-8ರವರೆಗೆ ತರಗತಿಗಳನ್ನು ತೆರೆಯಲಾಯಿತು. ಇದೀಗ 1-5ನೇ ತರಗತಿ ಮಕ್ಕಳಿಗೆ ಶಾಲೆ ತೆರೆಯುವ ಕುರಿತು ರಾಜ್ಯ ಸರ್ಕಾರ ಆಲೋಚನೆ ಮಾಡುತ್ತಿದೆ. ಹಬ್ಬದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ದಸರಾ ರಜೆ ಮುಗಿಯಲಿ. ಸರ್ಕಾರ ಸಮಾಲೋಚನೆ ನಡೆಸಿದ ನಂತರ ಹಾಗೂ ಕ್ಯಾಬಿನೆಟ್‌ನಲ್ಲಿ ಚರ್ಚೆ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಶಾಲೆಯೊಂದರಲ್ಲಿ ಸುಮಾರು 60 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ ನಂತರ ಶಾಲೆ ಮುಚ್ಚಿದ ಕುರಿತು ಪ್ರತಿಕ್ರಿಯಿಸಿದ ಅವರು, ಅದೊಂದು ಸಂಗತಿಯನ್ನೇ ಇಟ್ಟುಕೊಂಡು ಶಾಲೆಗಳನ್ನು ತೆರೆಯುವ ಕುರಿತು ಎರಡನೇ ಆಲೋಚನೆ ಮಾಡುವುದು ಸರಿಯಲ್ಲ. ಇದು ಎಲ್ಲದಕ್ಕೂ ಆಧಾರವಾಗುವುದಿಲ್ಲ.
ರಾಜ್ಯದಲ್ಲಿ 6-8ನೇ ತರಗತಿ ವರೆಗೆ ಶಾಲೆಗಳನ್ನು ಪುನಃ ತೆರೆದು ಒಂದು ತಿಂಗಳಾಗಿದೆ. ಇದು ವರೆಗೂ ಶಾಲೆಗಳಿಂದ ನಮಗೆ ಆತಂಕದ ವರದಿಯಾಗಿಲ್ಲ ಎಂದರು.
12 ವರ್ಷದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಆದರೆ ಪೋಷಕರ ಕಾಳಜಿ ಹಾಗೂ ಮಕ್ಕಳು ಸಣ್ಣವರಿರುವುದರಿಂದ ಸರ್ಕಾರ 1-5ನೇ ತರಗತಿ ಮಕ್ಕಳಿಗೆ ಶಾಲೆ ತೆರೆಯಲು ಆಲೋಚನೆ ಮಾಡುತ್ತಿದೆ. ಆತುರದಲ್ಲಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಲಸಿಕಾ ಅಭಿಯಾನದ ಕುರಿತು ಮಾಹಿತಿ ನೀಡಿದ ಅವರು, ‘ರಾಜ್ಯದ ಅರ್ಹ ಜನಸಂಖ್ಯೆಯ 80% ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 37% ಜನರಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಇಡೀ ಜನಸಂಖ್ಯೆಗೆ ಶೀಘ್ರವೇ ಲಸಿಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ದಸರಾ ಬಳಿಕ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗುವ ಸುಳಿವನ್ನು ಈಚೆಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೀಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ