ಬೇಡಿಕೆ ಈಡೇರದ ಹೊರತು ರೈತರ ಶವಸಂಸ್ಕಾರ ಮಾಡಲ್ಲ : ರಾಕೇಶ್ ಟಿಕಾಯತ್

ಲಕ್ಷ್ಮೀಪುರಖೇರಿ: ಪ್ರತಿಭಟನಾ ನಿರತ ರೈತರ ಹತ್ಯೆಗೆ ಕಾರಣವಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಮೃತರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.
ನಿನ್ನೆ ನಡೆದ ದುರ್ಘಟನೆಗೆ ತೀವ್ರ ಖಂಡನೆ ವ್ಯಕ್ತ ಪಡಿಸಿರುವ ಅವರು, ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಿಂದ ವಜಾಗೊಳಿಸಬೇಕು, ಅವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಆರೋಪದ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ಬೇಡಿಕೆಗಳ ಈಡೇರುವವರೆಗೂ ಮೃತರ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದು, ರಾಕೇಶ್ ಟಿಕಾಯತ್ ಅದಕ್ಕೆ ಬೆಂಬಲ ಸೂಚಿಸಿದ್ದಾರೆ. ನಿನ್ನೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಭೇಟಿ ನೀಡುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಉಪಮುಖ್ಯಮಂತ್ರಿಗೆ ಸ್ವಾಗತಕೋರಲು ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೂಡ ಜಮಾವಣೆಗೊಂಡಿದ್ದರು. ಈ ನಡುವೆ ಆಶಿಶ್ ಮಿಶ್ರಾರಿಗೆ ಸೇರಿದ ಕಾರು ಪ್ರತಿಭಟನಾ ನಿರತ ರೈತರ ಮೇಲೆ ಹರಿದಿದೆ ಎಂಬ ಆರೋಪಗಳಿವೆ. ಕಾರು ಹರಿದು ಹಾಗೂ ಹಿಂಸಾಚಾರದಲ್ಲಿ ನಾಲ್ವರು ರೈತರು ಮೃತಪಟ್ಟಿದ್ದಾರೆ. ಬಿಜೆಪಿ ನಾಲ್ವರು ಕಾರ್ಯಕರ್ತರು ಕೂಡ ಹತ್ಯೆಯಾಗಿದ್ದಾರೆ.
ಈ ಘಟನೆಯಲ್ಲಿ ಆಶಿಶ್ ಮಿಶ್ರಾ ಗನ್‍ನಿಂದ ಗುಂಡು ಹಾರಿಸಿರುವ ವಿಡಿಯೋ ವೈರಲ್ ಆಗಿದೆ. ತಮ್ಮ ಪುತ್ರನ ಮೇಲಿನ ಆರೋಪವನ್ನು ಅಲ್ಲಗಳೆದಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ, ತಮ್ಮ ಪುತ್ರ ಕಾರು ಚಲಾವಣೆ ಮಾಡುತ್ತಿರಲಿಲ್ಲ, ನಮ್ಮ ಕಾರು ಚಾಲಕ ಕಾರು ಚಾಲನೆ ಮಾಡುತ್ತಿದ್ದ. ಗುಂಡು ಹಾರಿಸಿರುವ ವಿಡಿಯೋ ನಕಲಿಯಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಐಐಟಿ-ಬಾಂಬೆಯಲ್ಲಿ 14 ದಿನ ವಾಸವಿದ್ದ ನಕಲಿ 'ಪಿಎಚ್‌ಡಿ ವಿದ್ಯಾರ್ಥಿ'...! ಈತನ ಗುಟ್ಟು ರಟ್ಟು ಮಾಡಿದ ಸೋಫಾ ಮೇಲಿನ ನಿದ್ರೆ...!!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement