ಪತ್ರಕರ್ತ ಹಬ್ಬುಗೆ ಜೀವಮಾನ ಸಾಧನೆ, ಪ್ರತಿಮಾಗೆ ‘ಅವ್ವ ಪತ್ರಕರ್ತೆ’ ಪ್ರಶಸ್ತಿ, ಅಕ್ಟೋಬರ್‌ ೧೦ರಂದು ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ದಿ. ೧೦ರಂದು ರವಿವಾರ ಬೆಳಗ್ಗೆ ೧೧.೩೦ಕ್ಕೆ ಹುಬ್ಬಳ್ಳಿಯ ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಕೆಯುಡಬ್ಲುಯುಜೆ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಆಗಮಿಸಲಿದ್ದು, ವಿಶೇಷ ಆಹ್ವಾನಿತರಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಪಾಲ್ಗೊಳ್ಳುವರು. ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ನೀಡಲಾಗುವ ಐದನೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅರುಣ ಕುಮಾರ ಹಬ್ಬು ಹಾಗೂ ಮಹಿಳಾ ಪತ್ರಕರ್ತರಿಗೆ ನೀಡಲಾಗುವ ಎರಡನೇ ‘ಅವ್ವ ಪತ್ರಕರ್ತೆ’ ಪ್ರಶಸ್ತಿಯನ್ನು ಶ್ರೀಮತಿ ಟಿ. ಕೆ. ಪ್ರತಿಮಾ ಅವರಿಗೆ ಪ್ರದಾನ ಮಾಡಲಾಗುತ್ತದೆ. ಜೀವಮಾನ ಸಾಧನೆ ಪ್ರಶಸ್ತಿಯು ೧೧ ಸಾವಿರ ರೂ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಅವ್ವ ಪತ್ರಕರ್ತೆ ಪ್ರಶಸ್ತಿಯು ೫ ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
೨೦೨೦-೨೧ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.ವಿ. ವಾಹಿನಿಗಳ ಲ್ಲಿ ಬಿತ್ತರಗೊಂಡ ಉತ್ತಮ ವರದಿ, ಲೇಖನ ಛಾಯಾಚಿತ್ರ ಹಾಗೂ ವಿಡಿಯೋ ಗಳಿಗೆ ಸಂಬಂಧಿಸಿದಂತೆ ೭ ವಿಭಾಗದಲ್ಲಿನ ೧೦ ಪ್ರಶಸ್ತಿಗಳನ್ನು ಆನಂದ ಅಂಗಡಿ, ಓದೇಶ ಸಕಲೇಶಪುರ, ಶಶಿಕುಮಾರ ಪತಂಗೆ, ಸುನೀಲ ಪಾಟೀಲ, ವೀಣಾ ಕುಂಬಾರ, ದಿವ್ಯಶ್ರಿ ಮುದಕವಿ, ಮಂಜುನಾಥ ಜರತಾರಘರ, ಆನಂದ ಹುದ್ದಾರ, ಶ್ರೀಧರ ಮುಂಡರಗಿ,ಪ್ರಕಾಶ ಮುಳ್ಳೊಳ್ಳಿ, ಕಿರಣ ಬಾಕಳೆ, ವಿನಾಯಕ ಬಾಕಳೆ, ಅವರಿಗೆ ನೀಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಅರುಣ ಕುಮಾರ ಹಬ್ಬು
ಉತ್ತರ ಕನ್ನಡ ಜಿಲ್ಲೆ ಮಂಚಿಕೇರಿ ಮೂಲದ ಇಂಗ್ಲೀಷ್ ಮತ್ತು ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರುಣಕುಮಾರ ಹಬ್ಬು ಪ್ರಜಾವಾಣಿ, ಉದಯವಾಣಿ, ಯು ಎನ್ ಐ ಮುಂತಾದ ಸಂಸ್ಥೆಗಳಲ್ಲಿ ಸುಮಾರು ಮೂರುವರೆ ದಶಕಗಳ ಕಾಲ ವರದಿಗಾರ, ಬ್ಯೂರೋ ಮುಖ್ಯಸ್ಥ ಹುದ್ದೆಗಳಲ್ಲಿ ಹುಬ್ಬಳ್ಳಿ, ಬೆಂಗಳೂರು, ಬೀದರ ಮುಂತಾದೆಡೆ ಸೇವೆ ಸಲ್ಲಿಸಿದ್ದಾರಲ್ಲದೇ ಹುಬ್ಬಳ್ಳಿಯ ವಿವಿಧ ಕಾಲೇಜುಗಳಲ್ಲಿ ಪತ್ರಿಕೋದ್ಯಮ ಉಪನ್ಯಾಸಕರಾಗಿ, ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ,
ವಿವಿಧ ಸಮಸ್ಯೆಗಳಿಗೆ ಕೈಗನ್ನಡಿಯಾಗುವಂತಹ ಅಲ್ಲದೇ ಐತಿಹಾಸಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ನೂರಾರು ಲೇಖನ ಬರೆದಿದ್ದಾರೆ. ಸುದ್ದಿ ಜಗದಗಲ ಮುಗಿಲಗಲ, ಮಹಿಳೆ ಮತ್ತು ಮಾಧ್ಯಮ, ಮಾಧ್ಯಮ ಕಾನೂನು ಸಹಿತ ೯ ಪುಸ್ತಕಗಳನ್ನು ಬರೆದಿದ್ದು, ಪ್ರತಿಷ್ಠಿತ ಪಾಂಡೇಶ್ವರ , ಮಾಧ್ಯಮ ಅಕಾಡೆಮಿ ಸಹಿತ ವಿವಿಧ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಶ್ರೀಮತಿ ಟಿ. ಕೆ. ಪ್ರತಿಮಾ
ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದ ಟಿ.ಕೆ.ಪ್ರತಿಮಾ ಅವರು ವಿಜಯ ಕರ್ನಾಟಕ, ಉದಯವಾಣಿ ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕಿಯಾಗಿ, ಹಿರಿಯ ಉಪಸಂಪಾದಕಿಯಾಗಿ ಎರಡು ದಶಕಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದಾರೆ.
ಹಲವು ವಿಶೇಷ ಪುರವಣಿಗಳು, ಅಲ್ಲದೇ ವಿಶೇಷ ಪುಟಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೇ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ಸಹ ನೀಡಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement