ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ: ಆಕ್ಷೇಪಣೆ ಸಲ್ಲಿಕೆಗೆ ರಾಜ್ಯ ಸರ್ಕಾರಕ್ಕೆ ತಿಂಗಳ ಕಾಲಾವಕಾಶ ನೀಡಿದ ಹೈಕೋರ್ಟ್‌

ಬೆಂಗಳೂರು: ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳಿಂದ ಅಗತ್ಯಕ್ಕಿಂತ ಹೆಚ್ಚು ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಒಂದು ತಿಂಗಳ ಕಾಲಾವಕಾಶ ನೀಡಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಪಿ.ರಾಕೇಶ್ ಮತ್ತು ಅಯ್ಯಪ್ಪ ದಾಸ್ ಬಾಲಗೋಪಾಲ್ ಸೇರಿದಂತೆ ಥಣಿಸಂದ್ರ ಮುಖ್ಯ ರಸ್ತೆಯ ಐಕಾನ್ ಅಪಾರ್ಟ್‌ಮೆಂಟ್‌ನ 32 ಮಂದಿ ನಿವಾಸಿಗಳು ಸುತ್ತಲಿನ 16 ಮಸೀದಿಗಳ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ ಪ್ರಭು ಅವರು “ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು-2000ರ ಅನ್ವಯ ಲಿಖಿತ ಪರವಾನಿಗೆ ಪಡೆಯದ ಹೊರತು ಧ್ವನಿವರ್ಧಕಗಳನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ನಗರದ ಥಣಿಸಂದ್ರ ಹಾಗೂ ಸುತ್ತಲಿನ 16 ಮಸೀದಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು” ಎಂದು ಪೀಠದ ಗಮನದ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಮಸೀದಿಗಳ ಆಡಳಿತ ಮಂಡಳಿ ಪರ ವಕೀಲರು “ಎಲ್ಲಾ 16 ಮಸೀದಿಗಳಲ್ಲಿ ಶಬ್ದ ಅಳತೆ ಮತ್ತು ನಿಯಂತ್ರಣ ಮಾಪಕಗಳನ್ನು ಅಳವಡಿಸಲಾಗಿದೆ. ಇದು ಶಬ್ದ ಮಿತಿಯನ್ನು ನಿಯಂತ್ರಿಸುತ್ತದೆ. ಒಂದೊಮ್ಮೆ ಮಿತಿಗಿಂತ ಅಧಿಕ ಶಬ್ದ ಉಂಟಾದರೆ ಅದು ನೇರವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಗಮನಕ್ಕೆ ಬರುತ್ತದೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಅಲ್ಲದೇ ಧ್ವನಿವರ್ಧಕಗಳ ಬಳಕೆಗೆ ಲಿಖಿತ ಪರವಾನಿಗೆ ಪಡೆದುಕೊಳ್ಳಲಾಗಿದೆ” ಎಂದು ತಿಳಿಸಿದರು.
ಈ ಮಧ್ಯೆ, ಪ್ರಕರಣವು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್‌ಜಿಟಿ) ವಿಚಾರಣಾ ವ್ಯಾಪ್ತಿಗೆ ಬರುತ್ತದೆ ಎಂದು ಸರ್ಕಾರಿ ವಕೀಲರು ಮತ್ತು ಮಸೀದಿಗಳ ಆಡಳಿತ ಮಂಡಳಿ ಪರ ವಕೀಲರು ಪೀಠದ ಗಮನ ಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಪೀಠವು “ಎನ್‌ಜಿಟಿ ವ್ಯಾಪ್ತಿಗೆ ಬರುವ ವಿಚಾರದ ಕುರಿತು ಹೈಕೋರ್ಟ್‌ನಲ್ಲಿ ಏಕೆ ಮನವಿ ಸಲ್ಲಿಸಲಾಗಿದೆ” ಎಂದು ಶ್ರೀಧರ್‌ ಪ್ರಭು ಅವರನ್ನು ಪೀಠ ಪ್ರಶ್ನಿಸಿತು.
ಅದಕ್ಕೆ ಉತ್ತರಿಸಿದ ವಕೀಲ ಶ್ರೀಧರ ಪ್ರಭು ಅವರು “ರಾಜ್ಯ ರಾಜಧಾನಿಯಲ್ಲಿ ಎನ್‌ಜಿಟಿ ಇಲ್ಲದಿದ್ದಾಗ, ನ್ಯಾಯಾಧಿಕರಣಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಎನ್‌ಜಿಟಿ ಪೀಠ ಬೆಂಗಳೂರಿನಲ್ಲಿ ಇಲ್ಲದ ಕಾರಣ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ” ಎಂದು ತಿಳಿಸಿದರು.
ಅರ್ಜಿದಾರರು ಮತ್ತು ಪ್ರತಿವಾದಿ ವಕೀಲರ ವಾದ ಆಲಿಸಿದ ಪೀಠವು ಅರ್ಜಿಗೆ ಸಂಬಂಧಿಸಿದ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿತು. ಅಲ್ಲದೇ, ಎನ್‌ಜಿಟಿ ನಿರ್ದೇಶನಗಳ ಪ್ರಕಾರ ಸದರಿ ಮನವಿಯ ವಿಚಾರಣಾ ಮಾನ್ಯತೆಯನ್ನು ಮುಂದಿನ ವಿಚಾರಣೆಯಂದು ಪರಿಶೀಲಿಸಲಾಗುವುದು ಎಂದು ಹೇಳಿದ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್‌ 16ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement