ಲಖಿಂಪುರ್ ಖೇರಿ: ಪಂಜಾಬ್ ಗಡಿಯಲ್ಲಿ ಸಿಧು ಬಂಧನ, ಕೇಂದ್ರ ಸಚಿವರ ಮಗನ ವಿಚಾರಣೆಗೆ ಕರೆಸಿದ ಪೊಲೀಸರು

ನವದೆಹಲಿ: ಲಖಿಂಪುರ್ ಖೇರಿ ಘಟನೆಯಲ್ಲಿ ರೈತರ ಮೇಲೆ ವಾಹನ ಹರಿಸಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ ಬಳಿಕ ಕೇಂದ್ರ ಸಚಿವರ ಮಗ ಆಶಿಶ್ ಮಿಶ್ರಾನನ್ನು (Union Minister Son Ashish Mishra) ವಿಚಾರಣೆಗೆ ಕರೆಸಿಕೊಳ್ಳಲಾಗಿದೆ ಎಂದು ಲಕ್ನೋ ಐಜಿ ಲಕ್ಷ್ಮಿ ಸಿಂಗ್ ಗುರುವಾರ ತಿಳಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ (ನಿವೃತ್ತ) ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನು ಹಿಂಸಾಚಾರದ ಘಟನೆಯ ತನಿಖೆಗಾಗಿ ಲಖಿಂಪುರ್ ಖೇರಿಯ ಕೇಂದ್ರ ಕಚೇರಿಯೊಂದಿಗೆ ಏಕ ಸದಸ್ಯ ತನಿಖಾ ಆಯೋಗವಾಗಿ ನೇಮಿಸಲಾಗಿದೆ. ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾದ ಮೊದಲ ಮಾಹಿತಿ ವರದಿ (ಎಫ್‌ಐಆರ್) ಮತ್ತು ಬಂಧನಗಳ ಕುರಿತು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರದಿಂದ ವಸ್ತುಸ್ಥಿತಿ ವರದಿಯನ್ನು ಕೇಳಿದೆ.
ಈ ಮಧ್ಯೆ ರೈತರ ಸಾವಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಮಗನನ್ನು ಬಂಧಿಸುವಂತೆ ಒತ್ತಾಯಿಸಿ ಲಖಿಂಪುರಕ್ಕೆ ತೆರಳಿದ್ದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಾಗೂ ಇಬ್ಬರು ಪಂಜಾಬ್ ಸಚಿವರನ್ನು ಮತ್ತು ಕೆಲವು ಶಾಸಕರನ್ನು ಉತ್ತರಪ್ರದೇಶ ಗಡಿಯಲ್ಲಿರುವ ಶಹಜಹಾನ್ಪುರದಲ್ಲಿ ಬಂಧಿಸಲಾಗಿದೆ. ಅಜಯ್ ಮಿಶ್ರಾ ತೇನಿ ಪುತ್ರನನ್ನು ಬಂಧಿಸದಿದ್ದರೆ ನಾಳೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಎಚ್ಚರಿಕೆ ನೀಡಿದ್ದಾರೆ.
ಲಖಿಂಪುರ್ ಖೇರಿ ಹಿಂಸಾಚಾರ ಘಟನೆಗೆ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಅಸಮಾಧಾನ ಹೊರಹಾಕಿದ್ದಾರೆ. ಅಹಂಕಾರ ಮತ್ತು ಕ್ರೌರ್ಯದ ಸಂದೇಶ ಪ್ರತಿಯೊಬ್ಬ ರೈತನ ಮನಸ್ಸನ್ನು ಪ್ರವೇಶಿಸುವ ಮೊದಲು ನ್ಯಾಯವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಎಂಟು ಜನರ ಸಾವಿನ ನಂತರ ಲಖಿಂಪುರ್ ಖೇರಿಗೆ ರಾಜಕೀಯ ನಾಯಕರು ಹೋಗಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ರಾಜಕಾರಣಿಗಳು ಲಖಿಂಪುರ್ ಖೇರಿ ಪ್ರವೇಶಿಸುವುದನ್ನು ಈ ಮೊದಲು ಸರ್ಕಾರ ನಿರ್ಬಂಧ ವಿಧಿಸಿತ್ತು. ಮೂರು ದಿನ ಕಳೆದ ಬಳಿಕ ಮೃತ ನಾಲ್ವರು ರೈತರ ಅಂತ್ಯ ಸಂಸ್ಕಾರ ನೆರವೇರಿದ ಬಳಿಕ ನೊಂದ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ರಾಜಕಾರಣಿಗಳಿಗೆ ಅನುಮತಿ ನೀಡಲಾಗಿದೆ.
ಮೃತ ನಾಲ್ವರು ರೈತರನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಒಂದು ಮೃತದೇಹದ ಸಂಬಂಧಿಕರು ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆಸಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆ ಬಳಿಕ ದೆಹಲಿಯಿಂದ ತಜ್ಞ ವೈದ್ಯರನ್ನು ಕರೆಯಿಸಿ ಬಹ್ರೈಚ್​ನಲ್ಲಿ ಎರಡನೇ ಬಾರಿಗೆ ಒಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷಾ ವರದಿ ಬಗ್ಗೆ ಮಾತನಾಡಿದ ಲಖಿಂಪುರದ ಇನ್ಸ್‌ಪೆಕ್ಟರ್ ಜನರಲ್ ಲಕ್ಷ್ಮಿ ಸಿಂಗ್ ಅವರು ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ರೈತನ ಎರಡನೇ ಮರಣೋತ್ತರ ಪರೀಕ್ಷೆಯಲ್ಲಿಯೂ ಯಾವುದೇ ಬಂದೂಕು ಗಾಯ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement