ಉಪಚುನಾವಣೆ, ನಿಗಮ ಮಂಡಳಿಗಳಿಗೆ ನೇಮಕ: ಸಿಎಂ ಬೊಮ್ಮಾಯಿ ದೆಹಲಿ ಭೇಟಿಗೆ ಬಂತು ಮಹತ್ವ

ಬೆಂಗಳೂರು:ಎರಡು ಕ್ಷೇತ್ರಗಳಿಗೆ ಉಪಚುನಾವಣೆ, ಸಚಿವ ಸಂಪುಟ ವಿಸ್ತರಣೆ, ನಿಗಮಮಂಡಳಿಗೆ ಅಧ್ಯಕ್ಷರ ನೇಮಕಾತಿ ಸೇರಿದಂತೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಪ್ರಮುಖರ ಜೊತೆ ಚರ್ಚೆ ನಡೆಸಲಿದ್ದಾರೆ.
ಇಂದು (ಶುಕ್ರವಾರ) ಬೆಳಿಗ್ಗೆ ನವದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬೊಮ್ಮಾಯಿ ಕೇಂದ್ರದ ಕೆಲವು ಸಚಿವರ ಭೇಟಿಯಾಗಲಿದ್ದು, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ತಮ್ಮ ಸಂಪುಟಕ್ಕೆ 29 ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದರು. ಪ್ರಸ್ತುತ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿಯಿದ್ದು, ಎರಡು ಡಜನ್‍ಗೂ ಅಧಿಕ ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಬಿ.ಎಸ್.ಯಡಿಯೂರಪ್ಪನವರ ಅಧಿಕಾರ ಅವಧಿಯಲ್ಲಿ ನೇಮಕಗೊಂಡಿದ್ದ ನಿಗಮಮಂಡಳಿ ಅಧ್ಯಕ್ಷರನ್ನು ಕೈಬಿಟ್ಟು ಹೊಸದಾಗಿ ನೇಮಕ ಮಾಡಬೇಕೆಂಬ ಒತ್ತಡ ಹೆಚ್ಚಾಗಿದೆ. ಈ ಬಗ್ಗೆಯೂ ಅಧ್ಯಕ್ಷರ ಜೊತೆ ಬೊಮ್ಮಾಯಿ ಅವರು ಚರ್ಚೆ ನಡೆಸಲಿದ್ದಾರೆ. ಅಧ್ಯಕ್ಷರನ್ನು ಮತ್ತು ಉಪಾಧ್ಯಕ್ಷರನ್ನು ಏಕಾಏಕಿ ತೆಗೆದು ಹಾಕಿದರೆ ಅಸಮಾಧಾನಕ್ಕೆ ಕಾರಣವಾಗಬಹುದೆಂಬ ಹಿನ್ನೆಲೆಯಲ್ಲಿ ನಡ್ಡಾ ಅವರ ಜೊತೆ ಚರ್ಚಿಸಿಯೇ ಬೊಮ್ಮಾಯಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಉಪಚುನಾವಣೆ ಬಗ್ಗೆಯೂ ಚರ್ಚೆ:
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಬೊಮ್ಮಾಯಿ ಅವರು ನಡ್ಡಾ ಅವರಿಂದ ಸಲಹೆಗಳನ್ನು ಪಡೆಯಲಿದ್ದಾರೆ. ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳಾದ ರಮೇಶ್ ಭೂಸನೂರ ಹಾಗೂ ಶಿವರಾಜ್ ಸಜ್ಜನವರ್ ಗೆಲ್ಲಿಸುವ ಜವಾಬ್ದಾರಿಯು ಬೊಮ್ಮಾಐಇ ಅವರ ಮೇಲಿರುವುದರಿಂದ ಈ ಬಗ್ಗೆ ಬಿಜೆಪಿ ಹೈಕಮಾಂಡ್‌ ಬಳಿ ಸಲಹೆಗಳನ್ನು ಪಡೆಯಲಿದ್ದಾರೆ.
ಈ ಚುನಾವಣೆಯು ಮುಂಬರುವ ಎಲ್ಲಾ ಹಂತದ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಶತಾಯಗತಾಯ ಎರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಬಿಜೆಪಿಗಿದೆ. ಈ ಬಾರಿಯ ಮುಖ್ಯಮಂತ್ರಿಗಳ ನವದೆಹಲಿ ಭೇಟಿ ಹಿಂದಿಗಿಂತಲೂ ಮಹತ್ವ ಪಡೆದುಕೊಂಡಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement