ನಾನು ಆರ್‌ಎಸ್‌ಎಸ್‌ ಹೊಗಳಿದ್ದೆ ಎಂಬುದು ಅಪ್ಪಟ ಸುಳ್ಳು: ದೇವೇಗೌಡ

ಬೆಂಗಳೂರು: ನಾನು ಆರ್‌ಎಸ್‌ಎಸ್‌ ಹೊಗಳಿದ್ದೆ ಎನ್ನುವುದು ಅಪ್ಪಟ ಸುಳ್ಳು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧವಿಲ್ಲ. ಸುಳ್ಳು ಹೇಳುವುದಕ್ಕೂ ಮಿತಿ ಇದೆ. ಆರ್‌ಎಸ್‌ಎಸ್ ಬಗ್ಗೆ ನನಗೆ ಗಂಧವೂ ಗೊತ್ತಿಲ್ಲ. ನಾನು ಬೈಠಕ್‌ ನಲ್ಲಿ ಕೂತಿಲ್ಲ, ಹೊಗಳಿಯೂ ಇಲ್ಲ. ರಾಮ್‌ಲೀಲಾ ಮೈದಾನದಲ್ಲಿ ಯಾರ‍್ಯಾರು ಏನು ಹೇಳಿದರು ಎಂಬ ಬಗ್ಗೆ ಎಲ್ಲವೂ ಗೊತ್ತಿದೆ, ಅದರ ಬಗ್ಗೆ ಈಗ ಚರ್ಚೆ ಬೇಡ ಎಂದರು.
ಎಲ್.ಕೆ.ಅಡ್ವಾಣಿ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು. ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಚರ್ಚೆ ಮಾಡಿದ್ದೆವು. ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ಕಾರ್ಯಕ್ರಮ ನಡೆದಿತ್ತು. ನನ್ನ ಅಧ್ಯಕ್ಷತೆಯಲ್ಲೇ ಕಾರ್ಯಕ್ರಮ ನಡೆದಿತ್ತು. ಸಭೆ ದುರುಪಯೋಗ ಮಾಡುವುದು ಸರಿಯಲ್ಲವೆಂದು ಹೇಳಿದ್ದೆ. ತುರ್ತು ಪರಿಸ್ಥಿತಿ ಬೆಂಬಲಿಸುತ್ತೇವೆಂದು ಹಲವರು ಬರೆದುಕೊಟ್ಟಿದ್ದರು ಎಂದು ತಿಳಿಸಿದರು.
ಎಂ.ಸಿ.ಮನಗೂಳಿ ನಿಧನ ನಂತರ ಪುತ್ರ ಅಶೋಕ ಮನಗೂಳಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದೊಯ್ದರು. ನಮ್ಮ ಅಭ್ಯರ್ಥಿಯನ್ನು ಹೊತ್ತೊಯ್ದರೆ ನಾವು ಸುಮ್ಮನಿರಬೇಕಾ, ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ ಎಂದು ಕಾಂಗ್ರೆಸ್‌ ಪ್ರಶ್ನಿಸಿದ ಅವರು, ಸಿಂದಗಿ ಕ್ಷೇತ್ರದಲ್ಲಿ ನಾವು ಬೇರೆ ಅಭ್ಯರ್ಥಿ ಹಾಕಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬರುತ್ತಿದೆ ಎಂದು ಗೊತ್ತಿದೆ. ನೆಹರೂ ಕಾಲದಿಂದ ಯಾವ್ಯಾವ ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿಗೆ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನನ್ನು ಕೆಣಕಲು ಹೋಗಬೇಡಿ, ಕೆಣಕಿದರೆ ಸರಿ‌ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್‌ನವರು ಮಾತ್ರ ಗುತ್ತಿಗೆ ಪಡೆದಿಲ್ಲ. ನಾನು ಬೆಳೆಸಿದ್ದ ಮುಸ್ಲಿಂ ಮುಖಂಡ ಈಗ ಅವರ ಬಲಗೈ ಶಕ್ತಿ ಎಂದು ಜಮೀರ್ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಪ್ರಮುಖ ಸುದ್ದಿ :-   ಪ್ರಚೋದನಾಕಾರಿ ವೀಡಿಯೊ : ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಅಧ್ಯಕ್ಷ ನಡ್ಡಾ, ವಿಜಯೇಂದ್ರಗೆ ಪೊಲೀಸ್‌ ನೋಟಿಸ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement