ಹಾನಗಲ್‌, ಸಿಂಧಗಿ ಉಪಚುನಾವಣೆ: ಪ್ರಚಾರಕ್ಕೆ ಘಟಾನುಘಟಿ ನಾಯಕರ ಎಂಟ್ರಿ…ರಂಗೇರುತ್ತಿದೆ ಕಣ

ಬೆಂಗಳೂರು: ಪ್ರತಿಷ್ಠೆಯ ಕಣವಾಗಿರುವ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆ ಕಾವೇರುತ್ತಿದ್ದು, ಪ್ರಚಾರದ ಕಣಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಘಟಾನುಘಟಿ ನಾಯಕರು ಧುಮುಕಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಉಪಚುನಾವಣೆ ಪ್ರತಿಷ್ಠೆಯಾಗಿದ್ದರೆ ಕಾಂಗ್ರೆಸ್ಸಿಗೆ ಇದು ಮುಂದಿನ ಚುನಾವಣೆಗೆ ಸವಾಲಾಗಿದೆ. ಹಾಗೂ ಜೆಡಿಎಸ್‍ಗೆ ಉತ್ತರ ಕರ್ನಾಟಕದಲ್ಲಿ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿಯೇ ಮೂರೂ ಪಕ್ಷಗಳು ಘಟನಾನುಘಟಿ ನಾಯಕರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.
ಈ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಮೂರೂ ಪಕ್ಷಗಳ ಮುಖಂಡರು ರಣತಂತ್ರ ಹೆಣೆದಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ನಳಿನ್‍ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿ.ವೈ.ವಿಜಯೇಂದ್ರ, ಸಿ.ಟಿ.ರವಿ ಮುಂತಾದ ಪ್ರಮುಖರು ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ.
ಹಾನಗಲ್‌ ಹಾಗೂ ಸಿಂಧಗಿ ಈ ಎರಡೂ ಕ್ಷೇತ್ರಗಳ ಗಲ್ಲಿ ಗಲ್ಲಿಗಳಲ್ಲಿ ಪ್ರಚಾರ ಬಿರುಸುಗೊಂಡಿದೆ. ಹಾನಗಲ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಇಂದು (ಶನಿವಾರ) ಪ್ರಚಾರ ನಡೆಸಿದರು.
ಸಿಂಧಗಿಯಲ್ಲಿ ಡಿ.ಕೆ.ಶಿವಕುಮಾರ್ ಅಬ್ಬರದ ಪ್ರಚಾರ ನಡೆಸಿದರು. ಎರಡು ಕ್ಷೇತ್ರಗಳಲ್ಲಿ ಬಹಿರಂಗ ಸಭೆ, ರೋಡ್ ಶೋ ನಡೆಸುವ ಮೂಲಕ ತಮ್ಮ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಿದರು.ಎಚ್.ಕೆ.ಪಾಟೀಲ್, ದಾವಣಗೆರೆ ಹಾಗೂ ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡರು, ನಾಡಗೌಡ, ಶಿವಾನಂದ ಪಾಟೀಲ್, ಎಂ.ಬಿ.ಪಾಟೀಲ್, ಪ್ರಕಾಶ್ ರಾಥೋಡ್ ಮತ್ತಿತರ ಹಲವು ಗಣ್ಯರು ಸಾಥ್ ನೀಡಿದರು.
ಕಳೆದ ಒಂದು ವಾರದಿಂದ ಹಾನಗಲ್‍ನಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವಿಗೆ ಟೊಂಕ ಕಟ್ಟಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಹಾಗೂ ಕಾಂಗ್ರೆಸ್‍ನ ವರಿಷ್ಠರು ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಜನರು ಬಿಜೆಪಿ ಸರ್ಕಾರದ ಬಗ್ಗೆ ಭ್ರಮ ನಿರಸನ ಹೊಂದಿದ್ದು , ಬದಲಾವಣೆ ಬಯಸುತ್ತಿದ್ದಾರೆ. ಇಂಧನ ಬೆಲೆಗಳು ಹೆಚ್ಚಾಗಿದೆ. ಕೋವಿಡ್ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳ ವೈಫಲ್ಯಗಳು ನಮ್ಮ ಗೆಲುವಿಗೆ ಪೂರಕವಾಗಿವೆ ಎಂಬುದು ಕಾಂಗ್ರೆಸ್‌ ನಾಯಕರು ಹೇಳುವ ಮಾತು.
ಜೆಡಿಎಸ್ ಎರಡು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದೆ. ಸಿಂಧಗಿಯಲ್ಲಿ ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎರಡು ದಿನಗಳ ಕಾಲ ಮೊಕ್ಕಾಂ ಹೂಡಿ ಪ್ರಚಾರ ನಡೆಸಿದ್ದಾರೆ. ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ತಮ್ಮ ಅಭ್ಯರ್ಥಿಯ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ತಾಳಿ ಕಟ್ಟುವ ವೇಳೆ ಮದುವೆಗೆ ನಿರಾಕರಿಸಿದ ವಧು : ಮಂಟಪದಲ್ಲೇ ಮುರಿದು ಬಿತ್ತು ಮದುವೆ…!

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement