
ಬೆಂಗಳೂರು: ಪೊಲೀಸರ ಡ್ರೆಸ್ ಮಾತ್ರ ಯಾಕೆ ಬದಲಾಯಿಸಿದ್ದೀರಿ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ ಎಂದು ಸರ್ಕಾರವನ್ನು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದ್ದಾರೆ.
ದಸರಾ ಹಬ್ಬದ ಸಂದರ್ಭದಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಉಡುಪಿಯ ಕಾಪು ಠಾಣೆಯ ಸಿಬ್ಬಂದಿ ಕೇಸರಿ ಶಾಲು ಧರಿಸಿ ಠಾಣೆಯ ಮುಂದೆ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಈ ಸಂಬಂಧ ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸರ ಧಿರಿಸು ಮಾತ್ರ ಯಾಕೆ ಬದಲಾಯಿಸಿದಿರಿ ಸಿಎಂ ಬೊಮ್ಮಾಯಿ ಅವರೇ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಒಂದೆಡೆ ಅಮಾಯಕ ಯುವಕ, ಯುವತಿಯರ ಮೇಲೆ ಪೊಲೀಸ್‌ಗಿರಿಯ ದೌರ್ಜನ್ಯ. ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ. ಮತ್ತೊಂದೆಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ. ಬಹಿರಂಗ ಬೆಂಬಲ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಜನಪರವಾದ ಉತ್ತಮ ಆಡಳಿತಕ್ಕೆ ಒಂದು ಗೌರವದ ಪರಂಪರೆ ಇದೆ. ಇದು ಯೋಗಿ ಆದಿತ್ಯನಾಥ್ ಅವರ ಉತ್ತರಪ್ರದೇಶದ ಜಂಗಲ್ ರಾಜ್ ಅಲ್ಲ. ಸಿಎಂ ಬೊಮ್ಮಾಯಿ ಅವರೇ ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿ ಎಂದು ಟ್ವೀಟ್ ಮಾಡಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ