ಸಿಂಘು ಗಡಿಯಲ್ಲಿ ಹತ್ಯೆ ಪ್ರಕರಣ; ಕುಟುಂಬಸ್ಥರಿಗೆ ಶವದ ಮುಖ ತೋರಿಸದೆ ಪೊಲೀಸರಿಂದಲೇ ಅಂತ್ಯಸಂಸ್ಕಾರ..!

ಚಂಡೀಗಡ: ಸಿಂಘು ಗಡಿ ಬಳಿ ಪತ್ತೆಯಾಗಿದ್ದ ಲಖ್ಬೀರ್ ಸಿಂಗ್ ಮೃತದೇಹದ ಮುಖವನ್ನು ಸಹ ಕುಟುಂಬಸ್ಥರಿಗೆ ತೋರಿಸದೆ ಪೊಲೀಸರು ನೇರವಾಗಿ ಅಂತ್ಯಸಂಸ್ಕಾರ ಮಾಡಿರುವ ಆರೋಪಗಳು ಕೇಳಿ ಬಂದಿದೆ.
ಶವ ಬರುವ ಮೊದಲೇ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅಂಬುಲೆನ್ಸ್ ಶವವನ್ನು ನೇರವಾಗಿ ಸ್ಮಶಾನಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಶವವನ್ನು ಸಂಪೂರ್ಣ ಪ್ಯಾಕ್ ಮಾಡಲಾಗಿತ್ತು. ಮೃತ ಲಖ್ಬೀರ್ ಸಿಂಗ್ ಪತ್ನಿ ಕೊನೆಯದಾಗಿ ಮುಖ ತೋರಿಸುವಂತೆ ಗೋಗರೆದರೂ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಮಾದರಿಯ ವಸ್ತುವಿನಿಂದ ಪ್ಯಾಕ್ ಮಾಡಿಲಾಗಿರುತ್ತದೆ. ಅಂತ್ಯಕ್ರಿಯೆ ವೇಳೆ ಈ ಪ್ಲಾಸ್ಟಿಕ್ ತೆಗೆಯಲಾಗುತ್ತದೆ. ಆದರೆ ಪೊಲೀಸರು ಪ್ಲಾಸ್ಟಿಕ್ ಸಹ ತೆಗೆಯಲಿಲ್ಲ. ತುಪ್ಪದ ಬದಲಾಗಿ ಡೀಸೆಲ್ ಬಳಸಿದ್ದರಿಂದ 10 ನಿಮಿಷದಲ್ಲಿ ಮೃತದೇಹ ಬೆಂಕಿಗಾಹುತಿ ಆಯಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಂತ್ಯಸಂಸ್ಕಾರದ ವೇಳೆ ಸ್ಮಶಾನದಲ್ಲಿ ಯಾವುದೇ ವಿದ್ಯುತ್ ದೀಪಗಳು ಸಹ ಇರಲಿಲ್ಲ. ಮೊಬೈಲ್ ಟಾರ್ಚ್ ಬಳಸಿಯೇ ಎಲ್ಲ ಕೆಲಸಗಳನ್ನು ಮುಗಿಸಲಾಗಿದೆ. ಲಖ್ಬೀರ್ ಸಿಂಗ್ ಶವಸಂಸ್ಕಾರದ ವೇಳೆ ಸ್ಥಳದಲ್ಲಿ ಡಿಎಸ್‍ಪಿ ಸುಜ್ಜಾ ಸಿಂಗ್ ಉಪಸ್ಥಿತರಿದ್ದರು. ಅಗ್ನಿಸ್ಪರ್ಶದ ಸಮಯದಲ್ಲಿಯೂ ಯಾವ ಗ್ರಾಮಸ್ಥರಿಗೆ ಅಂತಿಮ ದರ್ಶನಕ್ಕೆ ಅನುಮತಿ ನೀಡಿರಲಿಲ್ಲವಂತೆ.
ಲಖ್ಬೀರ್ ಸಿಂಗ್ ಶವ ಶನಿವಾರ ಆಗಮಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸಭೆ ನಡೆಸಿದ್ದರು. ಲಖ್ಬೀರ್ ಸಿಂಗ್ ಗುರು ಗ್ರಂಥ ಸಾಹಿಬ್ ಕ್ಕೆ ಅವಮಾನ ಮಾಡಿದ್ದು, ಆತನ ಆಂತ್ಯಸಂಸ್ಕಾರಕ್ಕೆ ಗ್ರಾಮದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದ್ದ ಸಂಸ್ಕಾರ್ ಸಮಿತಿ ಸದಸ್ಯರು, ಅಂತ್ಯಕ್ರಿಯೆ ಸಿಖ್ ಸಂಪ್ರದಾಯದಂತೆ ನಡೆಸಲು ನಾವು ಅನುಮತಿ ನೀಡುವುದಿಲ್ಲ. ಲಖ್ಬೀರ್ ಸಿಂಗ್ ಶವ ಗ್ರಾಮವನ್ನು ಪ್ರವೇಶಿಸಲು ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಹಾಗೂ ಗ್ರಾಮದ ಯಾವ ವ್ಯಕ್ತಿಯೂ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವಂತಿಲ್ಲ ಎಂದು ಡಂಗುರ ಸಾರಿದ್ದರು. ಶವವನ್ನು ಗ್ರಾಮ ಪ್ರವೇಶಿಸಲು ತಡೆಯಲು ಕೆಲವರು ಸಿದ್ಧತೆ ಸಹ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ತಾವೇ ಮುಂದೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement