ಇಂದಿನ ಕಲುಷಿತ ರಾಜಕಾರಣದಲ್ಲಿ ಎಂ.ಪಿ.ಕರ್ಕಿ ಡಾಕ್ಟ್ರು ಎಂಬ ಅಪರೂಪದ ಪರಿಶುದ್ಧ ರಾಜಕಾರಣಿ

ಕಾರವಾರ: ನೇರ ನಡೆ, ನುಡಿ ವ್ಯಕ್ತಿತ್ವದ ಅತ್ಯಂತ ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ, ಮಾಜಿ ಶಾಸಕ ಡಾ. ಎಂ. ಪಿ. ಕರ್ಕಿಯಂಥವರು ಈಗಿನ ರಾಜಕಾರಣದಲ್ಲಿ ಹುಡುಕಿದರೂ ಸಿಗುವುದು ಕಷ್ಟ. ಕುಮಟಾ -ಹೊನ್ನಾವರ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಪಕ್ಷ ರಾಜಕಾರಣದಾಚೆಗೂ ಮೀರಿ ಅಪಾರ ಗೌರವ ಪಡೆದಿದ್ದು ಅವರ ಈ ಗುಣಗಳಿಂದಾಗಿಯೇ. ಅವರಿಗೆ ಅವರ ಸ್ವಪಕ್ಷವಾದ ಬಿಜೆಪಿಯಲ್ಲಿ ಎಷ್ಟು ಗೌರವ ಇತ್ತೋ ಅಷ್ಟೇ ಗೌರವವನ್ನು ಬೇರೆಬೇರೆ ಪಕ್ಷಗಳ ನಾಯಕರೂ ಸಹ ಡಾ.ಕರ್ಕಿ ಅವರಿಗೆ ಕೊಡುತ್ತಿದ್ದರು. ಡಾಕ್ಟ್ರು ಯಾವಾದರೂ ಕೆಲಸ ಹಿಡಿದು ವಿದಾನಸೌಧಕ್ಕೋ, ಅಥವಾ ಕೇಂದ್ರದ ಯಾವುದೇ ಸಚಿವರ ಬಳಿ ಹೋದರೂ ಆ ಕೆಲದಲ್ಲಿ ಡಾಕ್ಟ್ರ ಯಾವುದೇ ಸ್ವಾರ್ಥ ಇರುವುದಿಲ್ಲ, ಅದರಲ್ಲಿ ಜನಪರ ಕಾಳಜಿ ಮಾತ್ರ ಇರುತ್ತದೆ ಎಂಬುದು ಅವರೆಲ್ಲರ ಬಲವಾದ ವಿಶ್ವಾಸವಾಗಿತ್ತು. ಯಾಕೆಂದರೆ ಕಳಂಕದ, ಕಾನೂನಿಗೆ ವಿರುದ್ಧವಾದ, ಅಥವಾ ದುಡ್ಡುಮಾಡಲಿಕ್ಕಾಗಿ ಅವರು ಯಾರದ್ದೇ ಕೆಲಸವನ್ನೂ ಯಾರ ಬಳಿಯೂ ತೆಗೆದುಕೊಂಡು ಹೋಗುತ್ತಿರಲಿಲ್ಲ ಎಂಬುದು ಈ ನಾಯಕರ ನಂಬಿಕೆ. ಈ ಕಾರಣಕ್ಕಾಗಿಯೇ ಡಾ.ಎಂ.ಪಿ.ಕರ್ಕಿಯವರು ಕೆಲಸಹಿಡಿದುಕೊಂಡು ಬಂದಿದ್ದಾರೆಂದರೆ ಅದಕ್ಕೆ ಕನ್ಮುಚ್ಚಿ ಸಹಿ ಹಾಕುತ್ತಿದ್ದರು. ಅವರ ಬಗ್ಗೆ ಅಂಥ ಒಂದು ನಂಬಿಕೆ ರಾಜಕೀಯ ವಲಯದಲ್ಲಿತ್ತು.
ಸಹಕಾರಿ, ಶಿಕ್ಷಣ ಕ್ಷೇತ್ರಗಳಲ್ಲೂ ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡ ವಿಶಿಷ್ಟ ನಾಯಕ…:
ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು ವಾಹನಗಳೇ ಇಲ್ಲದ ಅಂದಿನ ದಿನಗಳಲ್ಲಿ ಸೈಕಲ್ ತುಳಿದುಕೊಂಡು, ದೋಣಿಯ ಮೇಲೆ ಹೋಗಿ, ನಡೆದುಕೊಂಡು ಹೋಗಿಯೂ ಹಳ್ಳಿಗಳಿಗೆ ಹೋಗಿ ಸೇವೆ ಕೊಟ್ಟಿದ್ದರು. ಚಿಕ್ಕವರಿಗೆ ನಾಲ್ಕಾಣೆ, ದೊಡ್ಡವರಿಗೆ ೫೦ ಪೈಸೆ ಬಿಲ್ ಮಾಡುತ್ತಿದ್ದ ಅವರು ಬಡವರ ಡಾಕ್ಟ್ರು ಎಂದೇ ಹೊನ್ನಾವರದ ಸುತ್ತಮುತ್ತ ಖ್ಯಾತರಾಗಿದ್ದರು.
ವೈದ್ಯಕೀಯ ಸೇವೆಯ ಜೊತೆಜೊತೆಯಲ್ಲೇ ಜನಸಂಘದ ಮೂಲಕ ರಾಜಕೀಯ ರಂಗ ಪ್ರವೇಶಿಸಿದರು. ೧೯೬೦ರಲ್ಲಿ ಹೊನ್ನಾವರ ಮುನ್ಸಿಪಾಲ್ಟಿ ಚುನಾವಣೆಗೆ ನಿಂತು ಆಯ್ಕೆಯಾಗಿ ಅಧ್ಯಕ್ಷರೂ ಆಗಿ ಹಲವಾರು ರಚನಾತ್ಮಕ ಕೆಲಸಗಳನ್ನು ಮಾಡಿದರು.
ಭಟ್ಕಳದ ಡಾ. ಯು ಚಿತ್ತರಂಜನ್, ಕುಮಟಾದ ಡಾ. ಟಿ.ಟಿ. ಹೆಗಡೆಯವರ ಸಮಕಾಲೀನರಾಗಿ ಅವರ ಜೊತೆ ಸೇರಿ ಉತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸುವುದರಲ್ಲಿ ಮುಂಚೂಣಿಯಲ್ಲಿದ್ದರು.
೧೯೮೩ರಲ್ಲಿ ಪ್ರಥಮಬಾರಿಗೆ ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಉತ್ತರ ಕನ್ನಡಜಿಲ್ಲೆಯಲ್ಲಿ ಬಿಜೆಪಿಯ ಪ್ರಥಮ ಶಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲಿ ವರೆಗೆ ಕಾಂಗ್ರೆಸ್ಸಿನಿಂದ ಬೇಲಿಗುಟ್ಟ ನಿಂತರೂ ಆರಿಸಿ ಬರುತ್ತಿತ್ತು ಎಂಬ ಮಾತಿತ್ತು. ಅದನ್ನು ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಅವರು ಬಿಜೆಪಿಯ ಬಲವೇ ಇಲ್ಲದಿದ್ದಾಗ ನಮ್ಮ ಡಾಕ್ಟ್ರು ಎಂದು ಜನ ಮತಕೊಡುವಂತೆ ಮಾಡಿದವರು. ೧೯೯೪ರಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಅವರು ಆಯ್ಕೆಯಾದಾಗ ಒಮ್ಮೆಯೂ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. ಅನಂತರ ಡಾಕ್ಟ್ರು ಲೋಕಸಭೆಗೂ ಸ್ಪರ್ಧಿಸಿ ರನ್ನರ್‌ ಅಪ್‌ ಆಗಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೇ ಇಲ್ಲದಿದ್ದರೂ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದರು. ಅಂದು ಅವರ ಜನಪ್ರಿಯತೆ ಹಾಗೂ ಪ್ರಾಮಾಣಿಕತೆ ಜನಮಾನಸದಲ್ಲಿ ಅಷ್ಟೊಂದು ಪ್ರಭಾವ ಹೊಂದಿತ್ತು.
ಅಂದಿನ ದಿನಗಳಲ್ಲಿ ಇವರು ಅನುಷ್ಠಾನಗೊಳಿಸಿದ ಕುಮಟಾ-ಹೊನ್ನಾವರ ಪಟ್ಟಣಗಳಿಗೆ ಮರಾಕಲ್ ಕುಡಿಯುವ ನೀರು ಬಹುದೊಡ್ಡ ಯೋಜನೆಯಾಗಿತ್ತು. ಇಂದಿಗೂ ಎರಡೂ ಪಟ್ಟಣದ ಇದೇ ಕುಡಿಯುವ ನೀರಿನ ಮೇಲೆಯೇ ಅವಲಂಬಿಸಿದ್ದಾರೆ. ಅದು ಅನುಷ್ಠಾನ ಮಾಡುವುದು ಸುಲಭದ ಮಾತಾಗಿರಲಿಲ್ಲ. ಈ ಯೋಜನೆಯಲ್ಲಿ ಕುಮಟಾಕ್ಕೆ ಸುಮಾರು ೨೦-೨೨ ಕಿಲೋಮೀಟರ್‌ ದೂರದಿಂದ ನೀರು ತಂದರೆ ಇದು ಹೊನ್ನಾವರಕ್ಕೆ ಸುಮಾರು ೪೦-೪೫ ಕಿಲೋಮೀಟರ್‌ನಷ್ಟು ದೂರವಾಗುತ್ತಿತ್ತು. ಆದರೆ ಬೆನ್ನುಬಿಟದ ಡಾಕ್ಟ್ರು ಕೊನೆಗೂ ಅದನ್ನು ಪೂರ್ಣಗೊಳಿಸಿಯೇ ಬಿಟ್ಟರು.
ರಾಜಕಾರಣದ ಹೊರತಾಗಿ ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರ. ಮೂವತ್ತೈದು ವರ್ಷಗಳಿಗಿಂತ ಹೆಚ್ಚು ಕಾಲ ಎಂ.ಪಿ.ಇ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನಲ್ಲಿ ಉನ್ನತ ಕೋರ್ಸುಗಳನ್ನು ಆರಂಭಿಸಿದರಲ್ಲದೇ ಸಿಬಿಎಸ್‌ಸಿ ಶಾಲೆಯನ್ನೂ ಆರಂಭಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲೂ ಇವರ ಸೇವೆ ಅನನ್ಯ. ಕಾಸರಕೋಡಿನ ಸಹಕಾರಿ ಹಂಚಿನ ಕಾರ್ಖಾನೆಯ ಅಧ್ಯಕ್ಷರಾಗಿ ಅನಗತ್ಯ ಖರ್ಚುಚೆಚ್ಚಗಳನ್ನು ತಗ್ಗಿಸಿ ಕಾರ್ಖಾನಯನ್ನು ಲಾಭದತ್ತ ತಂದಿದ್ದರು. ಹೊನ್ನಾವರ ಹವ್ಯಕ ಅರ್ಬನ್ ಸೊಸೈಟಿ ಅಧ್ಯಕ್ಷರಾಗಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ರಚನಾತ್ಮಕ ಕೆಲಸ ಮಾಡಿದ್ದಾರೆ.
ಚತುಷ್ಪಥ ಹೆದ್ದಾರಿ ಹೋರಾಟ ಸೇರಿದಂತೆ ವಿವಿಧ ಜನಪರ ಹೊರಾಟಗಳಲ್ಲಿಯೂ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. ಸರ್ಕಾರದ ವಿವಿಧ ಸಮಿತಿಗಳಲ್ಲಿಯೂ ಕೆಲಸ ಮಾಡಿದ್ದಾರೆ.
ವಾಜಪೇಯಿ, ಅಡ್ವಾಣಿ, ಮುರಳಿಮನೋಹರ ಜೋಶಿ ಹೀಗೆ ದೇಶದ ಘಟನಾಘಟಿ ನಾಯಕರಯವ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಶುದ್ಧ ಹಸ್ತರಾಗಿದ್ದ ಅವರಿಗೆ ಬೆಂಗಳೂರಿನಿಂದ ದೆಹಲಿ ಮಟ್ಟದ ವರೆಗೂ ರಾಜಕೀಯ ವಲಯ ಹಾಗೂ ಅಧಿಕಾರಿಗಳ ವಲಯದಲ್ಲಿ ಅಪಾರ ಗೌರವ ಇತ್ತು. ಅಧಿಕಾರದಲ್ಲಿ ಯಾವ ಪಕ್ಷವಿದ್ದರೂ ಕೆಲಸ ಮಾಡಿಸಿಕೊಂಡು ಬರುತ್ತಿದ್ದ ಅವರ ಪ್ರಾಮಾಣಿಕತೆಯನ್ನು ಅವರ ರಾಜಕೀಯ ವಿರೊಧಿಗಳೂ ಪ್ರಶ್ನಿಸುತ್ತಿರಲಿಲ್ಲ.
ಡಾ. ಎಂ.ಪಿ.ಕರ್ಕಿಯವರ ನಿಧನದಿಂದ ರಾಜಕಾರಣದಲ್ಲಿನ ಶುದ್ಧ ಹಸ್ತದ ಕೊಂಡಿಯೊಂದು ಮರೆಯಾಗಿದ್ದು ಇಂದಿನ ಅಶುದ್ಧ ರಾಜಕಾರಣದ ದಿನಗಳಲ್ಲಿ ಅವರಂಥ ಪ್ರಾಮಾಣಿಕ ರಾಜಕಾರಣಿಗಳು ನೆನಪಾಗುತ್ತಲೇ ಇರುತ್ತಾರೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಸಂತಾಪ..:
ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ, ಕಟೀಲು ಡಾ.ಕರ್ಕಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಜನಸಂಘ ಮತ್ತು ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಕರ್ಕಿಯವರ ಪಾತ್ರ ಮಹತ್ವದ್ದಾಗಿತ್ತು. ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಸೇವೆಯಲ್ಲಿ ಇವರು ಮಾಡಿರುವ ಸೇವೆ ಅನುಕರಣೀಯ. ಕರ್ಕಿ ಅವರ ನಿಧನದಿಂದ ಸಂಘ ಪರಿವಾರ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ.
ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಆ ದೇವರಲ್ಲಿ ಕೋರುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲು, ಸಚಿವರಾದ ಈಶ್ವರಪ್ಪ, ಅಶ್ವತ್ಥ್ ನಾರಾಯಣ್, ಗೋವಿಂದ ಕಾರಜೋಳ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement