ಇ-ಶ್ರಮ್​​ ವೆಬ್​ಸೈಟ್​​ನಲ್ಲಿ ಎರಡೇ ತಿಂಗಳಲ್ಲಿ 4 ಕೋಟಿಗೂ ಅಧಿಕ ಕಾರ್ಮಿಕರಿಂದ ನೋಂದಣಿ

ನವದೆಹಲಿ: ದೇಶದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್​ ತಯಾರಿಸಲು ಕೇಂದ್ರ ಸರ್ಕಾರ ಹೊರತಂದ ಇ-ಶ್ರಮ್​ ಪೋರ್ಟಲ್ಲಿನಲ್ಲಿ (E-Shram Portal)​ ಎರಡೇ ತಿಂಗಳಲ್ಲಿ ಅಸಂಘಟಿತ ವಲಯದ 4 ಕೋಟಿಗೂ ಅಧಿಕ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಚಿವ ಭೂಪೇಂದ್ರ ಯಾದವ್​ ತಿಳಿಸಿದ್ದಾರೆ.
ಇದು ನಿಜಕ್ಕೂ ಒಂದು ಮೈಲಿಗಲ್ಲು. ಈ ಪೋರ್ಟಲ್​​ನಲ್ಲಿ ಹೆಸರು ನೋಂದಣಿ ಮಾಡಿಕೊಂಡ ಕಾರ್ಮಿಕರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅರ್ಹರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣ ಯೋಜನೆ ಉದ್ದೇಶ ಹೊಂದಿರುವ ಇ-ಶ್ರಮ್​ ಯೋಜನೆ ಆಗಸ್ಟ್​ 26ರಂದು ಉದ್ಘಾಟನೆಯಾಗಿದೆ. ಅಕ್ಟೋಬರ್​ 17ರವರೆಗೆ ಒಟ್ಟು 4.15 ಕೋಟಿ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು eshram.gov.in ವೆಬ್​​ಸೈಟ್​​ನಲ್ಲಿ ತೋರಿಸುತ್ತಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಕಾರ್ಮಿಕ ಸಚಿವಾಲಯ, ಪೋರ್ಟಲ್​​ನಲ್ಲಿ ನೋಂದಣಿ ಮಾಡಿಕೊಂಡವರಲ್ಲಿ ಶೇ.50.02ರಷ್ಟು ಮಹಿಳೆಯರೇ ಆಗಿದ್ದಾರೆ. ಹಾಗೆಯೇ ಶೇ.43 ಕಾರ್ಮಿಕರು ಒಬಿಸಿ ಸಮುದಾಯದವು, ಶೇ.27 ಜನರು ಜನರಲ್​ ಕೆಟೆಗರಿ, ಶೇ.23ರಷ್ಟು ಜನರು ಎಸ್​ಸಿಯವರು ಮತ್ತು ಶೇ.7ರಷ್ಟು ಕಾರ್ಮಿಕರು ಎಸ್​ಟಿ ಸಮುದಾಯಕ್ಕೆ ಸೇರಿದವರು ಎಂದು ತಿಳಿಸಿದೆ.
ಒಡಿಶಾ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಿಂದ ಅತಿಹೆಚ್ಚು ಸಂಖ್ಯೆಯ ಕಾರ್ಮಿಕರು ಇ-ಶ್ರಮ್​​ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲೂ ಕೃಷಿ ಮತ್ತು ನಿರ್ಮಾಣ ಕ್ಷೇತ್ರದ ಕಾರ್ಮಿಕರೇ ಜಾಸ್ತಿಯಿದ್ದಾರೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ. ಅದನ್ನು ಹೊರತುಪಡಿಸಿದರೆ ಆಟೋಮೊಬೈಲ್​, ಸಾರಿಗೆ, ಎಲೆಕ್ಟ್ರಾನಿಕ್ಸ್​, ಹಾರ್ಡ್​ವೇರ್​, ಶಿಕ್ಷಣ, ಆರೋಗ್ಯ, ರಿಟೇಲ್​, ಪ್ರವಾಸೋದ್ಯಮ, ಆತಿಥ್ಯ, ಆಹಾರ ಉದ್ಯಮದ ಕಾರ್ಮಿಕರೂ ಕೂಡ ಇ-ಶ್ರಮ್​ ವೇದಿಕೆಯಲ್ಲಿ ಹೆಸರು ನೋಂದಣಿ ಮಾಡಿದ್ದಾರೆ ಎಂದು ಹೇಳಿದೆ.
ನೋಂದಾಯಿತರಲ್ಲಿ ಶೇ.65.68 ರಷ್ಟು ಮಂದಿ 16-40ವರ್ಷದವರು. ಶೇ.34.32 ರಷ್ಟು ಮಂದಿ 40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎಂದು ಮಾಹಿತಿ ನೀಡಿದೆ.

ಪ್ರಮುಖ ಸುದ್ದಿ :-   ಹೇಮಾಮಾಲಿನಿ ಬಗ್ಗೆ ಅಸಭ್ಯ ಹೇಳಿಕೆ: ಕಾಂಗ್ರೆಸ್‌ ನಾಯಕ ರಣದೀಪ ಸುರ್ಜೇವಾಲಾಗೆ ಚುನಾವಣಾ ಪ್ರಚಾರದಿಂದ 48 ಗಂಟೆ ನಿಷೇಧ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement