ಡೀಸೆಲ್‌ ಬೆಲೆ ವಿಪರೀತ ಹೆಚ್ಚಳ: ಅ.28ರಿಂದ ಲಾರಿ ಮುಷ್ಕರದ ಎಚ್ಚರಿಕೆ..!

ಬೆಂಗಳೂರು: ಸರ್ಕಾರ ಕೂಡಲೇ ಡೀಸೆಲ್ ಮೇಲಿನ ತೆರಿಗೆ ಇಳಿಸಬೇಕು. ಇಲ್ಲದಿದ್ದರೆ ಇದೇ 28ರಿಂದ ಲಾರಿ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘ ಹೇಳಿದೆ.
ಮಿತಿಮೀರಿದ ತೆರಿಗೆ ವಿಸುತ್ತಿರುವುದರಿಂದ ಲಾರಿ ಉದ್ಯಮ ತೀವ್ರ ಸಂಕಷ್ಟಕ್ಕೀಡಾಗಿದೆ. ಹೀಗಾಗಿ ಮುಷ್ಕರ ನಡೆಸುವುದು ಅನಿವಾರ್ಯವಾಗಿರುವುದರಿಂದ ಇದೇ 23ರಂದು ಸಭೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುವುದಾಗಿ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಮತ್ತು ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.
ತಿಂಗಳಾಂತ್ಯದಲ್ಲಿ ಸರ್ಕಾರ ಡೀಸೆಲ್ ಮೇಲಿನ ತೆರಿಗೆಯನ್ನು 5 ರಿಂದ 10ರೂ. ಇಳಿಸಬೇಕು. ಇಲ್ಲದಿದ್ದರೆ ನಾವು ಟೋಲ್‍ಗಳಲ್ಲೇ ಗಾಡಿಗಳನ್ನು ನಿಲ್ಲಿಸಿ ಅನಿರ್ದಿಷ್ಟಾವ ಮುಷ್ಕರ ನಡೆಸುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.
ಕರ್ನಾಟಕದಲ್ಲಿ ಸುಮಾರು ಆರು ಲಕ್ಷ ಲಾರಿಗಳಿದ್ದು, ಡೀಸೆಲ್ ಬೆಲೆ ಏರಿಕೆ ಫೈನಾನ್ಸ್‌ನವರ ಕಿರುಕುಳದಿಂದ ಶೇ.30ರಷ್ಟು ಲಾರಿಗಳ ಓಡಾಟ ಸ್ಥಗಿತಗೊಂಡಿದೆ. ಅದರ ಅವಲಂಬಿತರು ಬೀದಿಯಲ್ಲಿ ನಿಂತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬೆಲೆ ಏರಿಕೆಯಿಂದ ಇಂಧನ ಬೆಲೆಯಲ್ಲಿ ಏರುಪೇರಾಗುತ್ತದೆ. ಆದರೆ, ಇಂಥ ಕಷ್ಟದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಿತಿಮೀರಿದ ತೆರಿಗೆ ವಿಧಿಸುತ್ತಿರುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದ್ದಾರೆ.
ಒಂದು ಲಾರಿ ದಿನವೊಂದಕ್ಕೆ 200 ಲೀಟರ್ ಡೀಸೆಲ್ ಖರ್ಚು ಮಾಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ 10 ಸಾವಿರ ರೂ. ತೆರಿಗೆ ಕಟ್ಟಬೇಕಾಗುತ್ತದೆ. ಕನಿಷ್ಠ ಡೀಸೆಲ್ ಮೇಲಿನ ತೆರಿಗೆಯನ್ನಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಳಿಕೆ ಮಾಡಬೇಕು. ಈಗಾಗಲೇ ಹಲವಾರು ಬಾರಿ ಮನವಿ ಮಾಡಿದ್ದೇವೆ. ಸಾರಿಗೆ ಸಚಿವರಾದ ಶ್ರೀರಾಮುಲು ಲಾರಿ ಮಾಲೀಕರ ನೆರವಿಗೆ ಬರಬೇಕು ಎಂದು ಮನವಿ ಮಾಡಿದ ಅವರು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಷ್ಕರ ನಡೆಸುವುದು ನಮಗೆ ಅನಿವಾರ್ಯವಾಗಲಿದೆ.
ಎಲ್ಲ ಸಂಘಟನೆಗಳೊಂದಿಗೆ ಇದೇ 23ರಂದು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೀತಿಯೇ ಸಿದ್ದು, ಪರಮೇಶ್ವರ ವೀಡಿಯೊ ಹೊರಬರಬಹುದು : ರಮೇಶ ಜಾರಕಿಹೊಳಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement