ರೈತರಿಗೆ ಸಿಹಿಸುದ್ದಿ: ರಸಗೊಬ್ಬರ ಸಬ್ಸಿಡಿ ಏರಿಕೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಮತ್ತಷ್ಟು ಹೆಚ್ಚಿಸಿದೆ.
ರೈತರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಿದರೆ ಪರಿಹಾರವಾಗಿ ರಸಗೊಬ್ಬರ ಕಂಪನಿಗಳಿಗೆ ಹೆಚ್ಚುವರಿ ₹ 28,655 ಕೋಟಿ ($ 3.8 ಶತಕೋಟಿ) ಹಣವನ್ನು ಒದಗಿಸಲಾಗುತ್ತದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಗಳವಾರ ತಡವಾಗಿ ಬಿತ್ತಿದ ಬೆಳೆಗಳಿಗೆ ಹೆಚ್ಚಿಸಿದ ಸಹಾಯಧನವನ್ನು ಅನುಮೋದಿಸಲಾಗಿದೆ. ಡಿ-ಅಮೋನಿಯಂ ಫಾಸ್ಫೇಟ್ ಮೇಲಿನ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ ₹ 438 ಮತ್ತು ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ರಸಗೊಬ್ಬರಗಳಿಗೆ ಪ್ರತಿ ಚೀಲಕ್ಕೆ ₹ 100 ಹೆಚ್ಚಿಸಲಾಗುತ್ತಿದೆ.
ಒಂದು ಚೀಲ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಇದುವರೆಗೂ ಇದ್ದ 1,200 ರೂ. ಸಬ್ಸಿಡಿಯನ್ನು 1,650 ರೂ.ಗಳಿಗೆ ಹೆಚ್ಚಿಸಿದೆ. ಯೂರಿಯಾ ಸಬ್ಸಿಡಿಯನ್ನು 1,500 ರೂ. ನಿಂದ 2,000 ರೂ.ಗಳಿಗೆ ಹೆಚ್ಚಿಸಿದೆ.
ನೈಟ್ರೋಜನ್‌ ಪಾಸ್ಪರಸ್‌ ಪೊಟ್ಯಾಶಿಯಂ(ಎನ್‍ಪಿಕೆ) ಮೇಲಿನ ಸಬ್ಸಿಡಿಯನ್ನು 900 ರೂ. ನಿಂದ 1,015 ರೂ.ಗೆ ಏರಿಕೆ ಮಾಡಿದೆ. ಸಿಂಗಲ್‌ ಸೂಪರ್ ಫಾಸ್ಫೇಟ್(ಎಸ್‌ಎಸ್‌ಪಿ) ಮೇಲಿನ 315 ರೂ.ಗಳ ಸಬ್ಸಿಡಿಯನ್ನು 375 ರೂ.ಗೆ ಹೆಚ್ಚಳ ಮಾಡಿದೆ.
ಕಳೆದ ವರ್ಷ ಒಂದು ಚೀಲ ಡಿಎಪಿ ಗೊಬ್ಬರಕ್ಕೆ ಕಂಪನಿಗಳು 1,700 ರೂ. ದರವನ್ನು ನಿಗದಿಪಡಿಸಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 500 ರೂ. ಸಬ್ಸಿಡಿ ನೀಡಿತ್ತು. ಹೀಗಾಗಿ ಒಂದು ಚೀಲ ಗೊಬ್ಬರವನ್ನು ರೈತರು 1,200 ರೂ. ದರದಲ್ಲಿ ಖರೀದಿಸುತ್ತಿದ್ದರು.
ಡಿಎಪಿಗೆ ಬಳಸಲಾಗುವ ಫಾಸ್ಪರಿಕ್ ಆಸಿಡ್, ಅಮೋನಿಯಾ ಇತ್ಯಾದಿಗಳ ಅಂತರರಾಷ್ಟ್ರೀಯ ಬೆಲೆಗಳು ಶೇ.60 ರಿಂದ ಶೇ.70 ರಷ್ಟು ಏರಿಕೆ ಕಂಡ ಹಿನ್ನೆಲೆಯಲ್ಲಿ ಭಾರತದಲ್ಲೂ ಗೊಬ್ಬರಗಳ ಬೆಲೆ ಭಾರೀ ಏರಿಕೆ ಆಗುತ್ತಿವೆ. ಹೀಗಾಗಿ ರೈತರ ಮೇಲೆ ಇದರ ಹೊರೆ ಬೀಳುವುದನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement