ಕೇರಳದಲ್ಲಿ ಭಾರೀ ಮಳೆ, ಭೂ ಕುಸಿತಕ್ಕೆ 39 ಸಾವು, ಪುನರ್ವತಿ ಶಿಬಿರಗಳಲ್ಲಿ 3851 ಕುಟುಂಬಗಳಿಗೆ ರಕ್ಷಣೆ: ಕೇರಳ ಸಿಎಂ ಪಿಣರಾಯಿ

ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತಗಳಿಂದ ಒಟ್ಟು 39 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 217 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಕನಿಷ್ಠ ಆರು ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮಳೆ ಸಂಬಂಧಿತ ಅನಾಹುತಗಳ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ವಿಜಯನ್, ನಾಲ್ಕು ದಿನಗಳ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಲ್ಲಿ 39 ಜನರು ಮೃತಪಟ್ಟಿದ್ದಾರೆ. ದುರಂತವು ಅವರ ಕುಟುಂಬ ಸದಸ್ಯರಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಸದನವು ಆ ನೋವನ್ನು ಹಂಚಿಕೊಳ್ಳುತ್ತಿದೆ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಧಾನಸಭೆಯಲ್ಲಿ ಹೇಳಿದರು.
ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಗಳನ್ನು ಕೈಬಿಡುವುದಿಲ್ಲ. ರಕ್ಷಣೆ ಮತ್ತು ಪರಿಹಾರ ಕ್ರಮಗಳ ಮೂಲಕ ತನ್ನ ಕಾಳಜಿ ಮತ್ತು ಪರಿಗಣನೆಯನ್ನು ತೋರಿಸುತ್ತದೆ. ಜೀವನೋಪಾಯಕ್ಕೆ ಮತ್ತೆ ದಾರಿ ಮಾಡಿಕೊಡುತ್ತದೆ ಎಂದು ಪಿಣರಾಯಿ ಭರವಸೆ ನೀಡಿದ್ದಾರೆ.
ಅಕ್ಟೋಬರ್ 11 ರಿಂದ ಕೇರಳವು ಭಾರೀ ಮಳೆಯಿಂದ ತತ್ತರಿಸಿದೆ. ಅಕ್ಟೋಬರ್ 18 ಮತ್ತು 19 ರಂದು ಅದರ ತೀವ್ರತೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ ಎಂದು ಅವರು ಹೇಳಿದರು. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಲಕ್ಷದ್ವೀಪದ ಕರಾವಳಿಯಲ್ಲಿ ಅಕ್ಟೋಬರ್ 13-17ರ ವರೆಗೆ ರೂಪುಗೊಂಡ ಕಡಿಮೆ ಒತ್ತಡ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಗೆ ಕಾರಣವಾಯಿತು. ನಿನ್ನೆ ವರೆಗೆ (ಅಕ್ಟೋಬರ್ 19), ರಾಜ್ಯದಲ್ಲಿ ಸಾವಿನ ಸಂಖ್ಯೆ 39 ಮತ್ತು ಕಾಣೆಯಾದವರ ಸಂಖ್ಯೆ ಆರು. ರಾಜ್ಯದಾದ್ಯಂತ 3,851 ಕುಟುಂಬಗಳನ್ನು 304 ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಜಯನ್ ಮಾಹಿತಿ ನೀಡಿದರು.
ಒಟ್ಟು 11 ಎನ್‌ಡಿಆರ್‌ಎಫ್ ತಂಡಗಳು,ಭಾರತೀಯ ಸೇನೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿವೆ ಮತ್ತು ವಾಯುಪಡೆ ಮತ್ತು ನೌಕಾಪಡೆಯ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗೆ ಸಜ್ಜಾಗಿವೆ ಎಂದು ಹೇಳಿದರು.
ಅಕ್ಟೋಬರ್ 20 ರಿಂದ ದಕ್ಷಿಣದ ರಾಜ್ಯಗಳಲ್ಲಿ ಎರಡು-ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಅದಕ್ಕೆ ತಕ್ಕಂತೆ ಜನರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ತಿಳಿಸಿದರು.
ಜಿಲ್ಲಾಡಳಿತ ಮತ್ತು ಆಯಾ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳಿಗೆ ತಿಳಿಸಿದ ನಂತರ ಅಣೆಕಟ್ಟುಗಳಲ್ಲಿ ನೀರನ್ನು ನಿಯಂತ್ರಿತ ರೀತಿಯಲ್ಲಿ ಬಿಡಲಾಗುತ್ತಿದೆ. ಧಾರಾಕಾರ ಮಳೆಯನ್ನು ಎದುರಿಸಲು ಎಲ್ಲರ ಬೆಂಬಲವನ್ನು ಸಿಎಂ ಪಿಣರಾಯಿ ಕೋರಿದ್ದಾರೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement