ಮಕ್ಕಳ ಕೋವಿಡ್‌ ಲಸಿಕೆಗೆ ಅನುಮೋದನೆ ಸಿಕ್ಕಿದ ನಂತರ 16-17 ವರ್ಷದ ಮಕ್ಕಳು, ದೀರ್ಘಾವಧಿ ಕಾಯಿಲೆಯುಳ್ಳ ಮಕ್ಕಳಿಗೆ ಆದ್ಯತೆ

ಬೆಂಗಳೂರು: ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಕೋವಿಡ್ ಲಸಿಕೆಗಳಿಗೆ ಅನುಮೋದನೆ ಸಿಕ್ಕ ಬಳಿಕ 16-17 ವರ್ಷದ ಮಕ್ಕಳಿಗೆ ಮೊದಲು ಲಸಿಕೆ ಹಾಕುವ ಸಾಧ್ಯತೆಗಳಿವೆ. ರಾಜ್ಯದ ತಾಂತ್ರಿಕ ಸಲಹಾ ಸಮಿತಿಯು, ಯೋಜನೆಗಳನ್ನು ರೂಪಿಸಿ, ಸಿದ್ಧತೆ ನಡೆಸುವಂತೆ ಸಲಹೆ ನೀಡಿದೆ.
ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಲಸಿಕೆ ಅತ್ಯಂತ ಮುಖ್ಯವಾಗಿದ್ದು, ಮಕ್ಕಳಿಗಾಗಿ ಈಗಾಗಲೇ ಎರಡು ಲಸಿಕೆಗಳು ಸಿದ್ಧಗೊಂಡಿವೆ. ಝೈಡಸ್ ಕ್ಯಾಡಿಲಾದ ಝೈಕೋವ್ ಡಿ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗೆ ಶೀಘ್ರದಲ್ಲೇ ಅನುಮೋದನೆ ಸಾಧ್ಯತೆ ನಿಚ್ಚಳವಾಗಿದೆ.
ಹೆಚ್ಚು ವಯಸ್ಸಿನ ಮಕ್ಕಳಾದ 16-17 ವರ್ಷದ ಮಕ್ಕಳಿಗೆ ಮೊದಲಿಗೆ ಲಸಿಕೆ ನೀಡಬೇಕು, ನಂತರ ಚಿಕ್ಕ ಮಕ್ಕಳಿಗೆ ಲಸಿಕೆ ನೀಡುವುದನ್ನು ನಾವು ಶಿಫಾರಸು ಮಾಡುತ್ತೇವೆ. ಅಲ್ಲದೆ, ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೂ ಮೊದಲ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಆರಂಭದಲ್ಲಿ ಲಭ್ಯವಿರುವ ಡೋಸ್‍ಗಳ ಸಂಖ್ಯೆ ಸೀಮಿತ ಇರುವುದರಿಂದ, ವಯಸ್ಕರಿಗೆ ಲಸಿಕೆ ಹಾಕುವಾಗ ಅಳವಡಿಸಿಕೊಂಡ ಮಾದರಿಯನ್ನೇ ಇಲ್ಲಿಯೂ ಅನುಸರಿಸುವುದು ಉತ್ತಮ ಎಂದು ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳಿಗೆ ಲಸಿಕೆ ನೀಡುವ ವೇಳೆಯ 17 ವರ್ಷದ ಮಕ್ಕಳು ಹಾಗೂ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲು ಲಸಿಕೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ಯೋಜನೆಗೆ ಶಿಶುವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆರನ್ನು ಸೇರ್ಪಡೆಗೊಳಿಸಿಕೊಳ್ಳಬೇಕು. ಲಸಿಕೆಗೆ ಅನುಮೋದನೆ ಹಾಗೂ ಮಾರ್ಗಸೂಚಿಗಳು ಬಂದ ಕೂಡಲೇ ಎಂಆರ್ ವ್ಯಾಕ್ಸಿನೇಷನ್ ಅಭಿಯಾನದ ವೇಳೆ ಅನುಭವ ಹೊಂದಿದ್ದವರನ್ನು ಈ ಲಸಿಕಾ ಅಭಿಯಾನದಲ್ಲಿ ಸೇರ್ಪಡೆಗೊಳಿಸಿಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗ ಪತ್ತೆ ; ಡಿಜಿ ಹಳ್ಳಿ ನಿಷೇಧಿತ ವಲಯವೆಂದು ಘೋಷಣೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement