ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್, ಶೇ.38 ಜನರಿಗೆ 2ನೇ ಡೋಸ್ ನೀಡಿಕೆ; ಸಚಿವ ಸುಧಾಕರ್

ಹುಬ್ಬಳ್ಳಿ : ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಭಾರತದಲ್ಲಿ ಅಮೆರಿಕದ ಎರಡೂವರೆ ಪಟ್ಟು, ಬ್ರೆಜಿಲ್ ನ 4 ಪಟ್ಟು, ಜಪಾನ್ ನ 8 ಪಟ್ಟು, ಇಂಗ್ಲೆಂಡ್ ನ 10 ಪಟ್ಟು, ಯುರೋಪ್ ದೇಶಗಳ 2 ಪಟ್ಟು ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ಡಾ. ಕೆ.ಸುಧಾಕರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ದೇಶದಲ್ಲಿ ಎರಡೂ ಡೋಸ್ ಪಡೆದವರ ಸಂಖ್ಯೆ 27.4 ಕೋಟಿ. ಅನೇಕ ದೇಶಗಳಲ್ಲಿ ಹಣ ಕೊಟ್ಟು ಖರೀದಿ ಮಾಡುವ ವ್ಯವಸ್ಥೆ ಇದ್ದು, ಭಾರತದಲ್ಲಿ ಉಚಿತ ಲಸಿಕೆ ನೀಡಲಾಗಿದೆ. ಇದಕ್ಕಾಗಿ 45 ಸಾವಿರ ಕೋಟಿ ರೂ. ನೀಡಲಾಗಿದೆ. ಲಸಿಕೆ ಖರೀದಿಗೆ ರಾಜ್ಯ ಸರ್ಕಾರದಿಂದ ಒಂದು ರೂಪಾಯಿಯೂ ನೀಡಿಲ್ಲ ಎಂದರು.
ರಾಜ್ಯದಲ್ಲಿ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಇನ್ನೂ ಶೇ.17 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ.62 ಜನರಿಗೆ 2ನೇ ಡೋಸ್ ನೀಡಬೇಕಿದೆ. ರಾಜ್ಯದಲ್ಲಿ ಈಗ 60 ಲಕ್ಷ ಲಸಿಕೆ ದಾಸ್ತಾನು ಇದೆ. ಮೊದಲನೇ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ನಿರ್ಲಕ್ಷ್ಯ ತೋರಬಾರದು. ಒಂದೇ ಡೋಸ್ ನಿಂದ ಸಂಪೂರ್ಣ ರೋಗನಿರೋಧಕ ಶಕ್ತಿ ದೊರೆಯುವುದಿಲ್ಲ. ಎರಡನೇ ಡೋಸ್ ಅನ್ನು ಪಡೆಯಬೇಕು ಎಂದರು.
100 ಕೋಟಿ ಕೋವಿಡ್ ಲಸಿಕೆಯ ದೊಡ್ಡ ಮೈಲಿಗಲ್ಲನ್ನು ದೇಶ ತಲುಪಿದೆ. ಲಸಿಕೆ ಆವಿಷ್ಕರಿಸಿದ ವಿಜ್ಞಾನಿಗಳು, ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆ ಎಲ್ಲರೂ ಇದಕ್ಕಾಗಿ ಶ್ರಮಿಸಿದ್ದಾರೆ. ಬಿಸಿಜಿ ಲಸಿಕೆ ಆವಿಷ್ಕಾರವಾದ 24 ವರ್ಷಗಳ ಬಳಿಕ ಭಾರತಕ್ಕೆ ಬಂತು. ಹೆಪಟೈಟಿಸ್-ಬಿ 15 ವರ್ಷದ ಬಳಿಕ ಬಂದಿತ್ತು. 12 ರೋಗಗಳ ಲಸಿಕೆಗಳು ಬೇರೆ ದೇಶಗಳಿಂದ ಭಾರತಕ್ಕೆ ಬರಲು ಅನೇಕ ವರ್ಷ ಬೇಕಾಯಿತು. ಆದರೆ ಕೊರೊನಾ ಲಸಿಕೆಯನ್ನು 2021 ರ ಜನವರಿ 16 ರಂದು ಮೊದಲು ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆ, ದೂರದೃಷ್ಟಿ, ನಾಯಕತ್ವದಿಂದ ಇದನ್ನು ಸಾಧಿಸಲು ಸಾಧ್ಯವಾಗಿದೆ ಎಂದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement