ಕೋವಿಡ್ -19 ಲಸಿಕೆಯ ಭಾರತೀಯ ತಯಾರಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆಗಳನ್ನು ನೀಡುವ ಮೂಲಕ ನೂತನ ಮೈಲಿಗಲ್ಲು ದಾಟಿದ ಬೆನ್ನಲ್ಲೇ ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಏಳು ಭಾರತೀಯ ಕೊವಿಡ್-19 ಲಸಿಕೆ ತಯಾರಕರ ಜೊತೆ ಸಭೆ ನಡೆಸಿದ್ದಾರೆ.
ಭಾರತೀಯ ಕೊರೊನಾ ಲಸಿಕೆ ಉತ್ಪಾದಕರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರೆಲ್ಲರ ಸಹಕಾರದಿಂದ ದೇಶದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆಯ ಮೈಲುಗಲ್ಲನ್ನು ಸಾಧಿಸಿದ ಬಗ್ಗೆ ಮಾತುಕತೆ ನಡೆಸಿದ್ದಾರೆ.ಸಭೆಯಲ್ಲಿ ಲಸಿಕೆ ಸಂಶೋಧನೆಯನ್ನು ಮುಂದುವರಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಮೋದಿ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಭಾರತ ಮೂಲದ ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್, ಡಾ. ರೆಡ್ಡಿ ಲ್ಯಾಬೋರೇಟರೀಸ್, ಜೈಡಸ್ ಕ್ಯಾಡಿಲಾ, ಬಯೋಲಾಜಿಕಲ್ ಇ, ಗೆನ್ನೋವಾ ಬಯೋಫಾರ್ಮಾ ಮತ್ತು ಪ್ಯಾನೇಸಿಯ ಬಯೋಟೆಕ್ ಉತ್ಪಾದನಾ ಕಂಪನಿಗಳ ಪ್ರತಿನಿಧಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಪಾಲ್ಗೊಂಡಿದ್ದರು.
ಭಾರತದಲ್ಲಿ ಇನ್ನು ಉಳಿದ ಅರ್ಹ ಮಂದಿಗೆ ಸಾಧ್ಯವಾದಷ್ಟೂ ಬೇಗ ಲಸಿಕೆ ನೀಡುವ ಮಾರ್ಗಗಳ ಬಗ್ಗೆ ಹಾಗೂ ‘ಎಲ್ಲರಿಗೂ ಲಸಿಕೆ’ ಎಂಬ ಅಭಿಯಾನದ ಅಡಿಯಲ್ಲಿ ಇತರ ದೇಶಗಳಿಗೂ ಸಹಾಯ ಮಾಡುವ ಬಗ್ಗೆ ಮೋದಿ ಈ ಸಭೆಯಲ್ಲಿ ಚರ್ಚಿಸಿದ್ದಾರೆ.
ಭಾರತದ ವಯಸ್ಕರ ಜನಸಂಖ್ಯೆಯ ಶೇ. 75ಕ್ಕಿಂತ ಹೆಚ್ಚು ಜನರು ಈಗಾಗಲೇ ಕನಿಷ್ಠ ಒಂದು ಡೋಸ್ ಕೊವಿಡ್ ಲಸಿಕೆಯನ್ನು ಪಡೆದಿದ್ದಾರೆ. ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ದೇಶದ ಸುಮಾರು 93 ಕೋಟಿ ವಯಸ್ಕರಲ್ಲಿ ಶೇ.31ರಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.
ಇತ್ತೀಚಿನ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ನಿರ್ವಹಿಸಲಾದ ಸಂಚಿತ COVID-19 ಲಸಿಕೆ ಪ್ರಮಾಣವು 101.30 ಕೋಟಿ ಮೀರಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement