ಆರ್ಯನ್‌ ಖಾನ್ ಪ್ರಕರಣ: ಸೈಲ್ ಅಫಿಡವಿಟ್‌ ವಿರುದ್ಧ ಎನ್‌ಸಿಬಿ, ಸಮೀರ್‌ ವಾಂಖೆಡೆ ಸಲ್ಲಿಸಿದ್ದ ಮನವಿ ತಿರಸ್ಕೃತ

ಮುಂಬೈ: ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಗೆ ಅಡ್ಡಿಪಡಿಸುವ ಯತ್ನಗಳನ್ನು ತಡೆಯಲು ನಿರ್ದೇಶಿಸುವಂತೆ ಕೋರಿ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಹಾಗೂ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಮುಂಬೈ ಸೆಷನ್ಸ್‌ ನ್ಯಾಯಾಲಯದ ಮುಂದೆ ಸಲ್ಲಿಸಿದ್ದ ಮನವಿ ತಿರಸ್ಕೃತವಾಗಿದೆ.
ಆರ್ಯನ್ ಖಾನ್‌ ಡ್ರಗ್‌ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಯಾಗಿರುವ ಕೆ. ಪಿ. ಗೋಸಾವಿಯ ಅಂಗರಕ್ಷಕ ಹಾಗೂ ಪ್ರಕರಣದ ಮತ್ತೋರ್ವ ಸಾಕ್ಷಿ ಪ್ರಭಾಕರ್ ಸೈಲ್ ಸಲ್ಲಿಸಿದ್ದಾರೆ ಎನ್ನಲಾದ ಅಫಿಡವಿಟ್‌ ಹಿನ್ನೆಲೆಯಲ್ಲಿ ಯಾವುದೇ ನ್ಯಾಯಿಕ ಪರಿಗಣನೆಗೆ ನ್ಯಾಯಾಲಯವು ಮುಂದಾಗದಂತೆ ಎನ್‌ಸಿಬಿ ಕೋರಿತ್ತು. ಆದರೆ ಈ ಮನವಿಯನ್ನು ವಿಶೇಷ ನ್ಯಾಯಾಧೀಶ ವಿ. ವಿ. ಪಾಟೀಲ್ ಪುರಸ್ಕರಿಸಲಿಲ್ಲ.
ನ್ಯಾಯಾಧೀಶರು ತಮ್ಮ ಆದೇಶದಲ್ಲಿ, ಸೂಕ್ತ ಹಂತದಲ್ಲಿ ಸೂಕ್ತ ಆದೇಶವನ್ನು ನೀಡುವುದು ಸಂಬಂಧಪಟ್ಟ ನ್ಯಾಯಾಲಯ ಅಥವಾ ಪ್ರಾಧಿಕಾರಕ್ಕೆ ಒಳಪಟ್ಟ ವಿಚಾರ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿಗಳ ವಿಚಾರಣೆಯು ಬಾಂಬೆ ಹೈಕೋರ್ಟ್‌ ಮುಂದಿವೆ. ಹಾಗಾಗಿ, ಈ ನ್ಯಾಯಾಲಯವು ಆ ರೀತಿಯ ಯಾವುದೇ ಆದೇಶವನ್ನು ನೀಡಲಾಗದು,” ಎಂದು ಹೇಳಿದರು.
ನ್ಯಾಯಾಲಯದ ಮುಂದೆ ಸಲ್ಲಿಸಿದ್ದ ಎರಡು ಪುಟಗಳ ಅಫಿಡವಿಟ್‌ನಲ್ಲಿ ವಾಂಖೇಡೆ ಅವರು, “ತಮ್ಮನ್ನು ಬಂಧಿಸುವ ಹಾಗೂ ಸೇವೆಯಿಂದ ಹೊರಗೆ ಹಾಕುವ ಬೆದರಿಕೆಗಳಿವೆ. ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ದಾಳಿಗಳು ನಡೆಯುತ್ತಿವೆ” ಎಂದಿದ್ದಾರೆ. “ಪ್ರಾಮಾಣಿಕ ಹಾಗೂ ಪಕ್ಷಪಾತ ರಹಿತ ತನಿಖೆಯನ್ನು ಕೈಗೊಳ್ಳುವುದು ಕೆಲ ಹಿತಾಸಕ್ತಿಗಳಿಗೆ ಬೇಕಿಲ್ಲದೆ ಇರುವುದರಿಂದ ತಮಗೆ ಬಂಧನದ ಭೀತಿ ಎದುರಾಗಿದೆ” ಎಂದು ಅವರು ಹೇಳಿದ್ದರು.
ಮತ್ತೊಂದೆಡೆ ಎನ್‌ಸಿಬಿಯೂ ಸಹ, ಸೈಲ್‌ ಅಫಿಡವಿಟ್‌ನಲ್ಲಿರುವ ವಿಷಯಗಳು ಸಂಪೂರ್ಣವಾಗಿ ಸುಳ್ಳು. ಇದು ಎನ್‌ಸಿಬಿಯಂತಹ ಸ್ವತಂತ್ರ ತನಿಖಾ ಸಂಸ್ಥೆಯ ಹೆಸರಿಗೆ ಕಳಂಕ ತರುವ, ಧಕ್ಕೆ ತರುವ ಕಿಡಿಗೇಡಿತನದ ಪ್ರಯತ್ನವಾಗಿದ್ದು ಪ್ರಕರಣದ ದಾರಿ ತಪ್ಪಿಸುವ ಉದ್ದೇಶ ಹೊಂದಿದೆ ಎಂದಿತ್ತು. ಅಲ್ಲದೆ, ಅಫಿಡವಿಟ್‌ನಲ್ಲಿ ಮಹಿಳೆಯೊಬ್ಬರು ಪಂಚ ಸಾಕ್ಷ್ಯಗಳಲ್ಲಿ ಒಬ್ಬರನ್ನು ಭೇಟಿ ಮಾಡಿ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದಿರುವುದು ಸಹ ತನಿಖೆಯನ್ನು ದಾರಿ ತಪ್ಪಿಸುವ ಭಾಗವಾಗಿದೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಸೈಲ್‌ ಅಫಿಡವಿಟ್‌ ಹಿನ್ನೆಲೆಯಲ್ಲಿ ಯಾವುದೇ ನ್ಯಾಯಿಕ ಪರಿಗಣನೆಗೆ ನ್ಯಾಯಾಲಯವು ಮುಂದಾಗದಂತೆ ಕೋರಲಾಗಿತ್ತು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement