ಕ್ರೂಸ್‌ ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಬಾಂಬೆ ಹೈಕೋರ್ಟ್

ಮುಂಬೈ: ಕ್ರೂಸ್‌ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಇಂದು (ಬುಧವಾರ) ಆರ್ಯನ್​ ಖಾನ್​, ಅರ್ಬಾಜ್ ಮರ್ಚೆಂಟ್, ಮುನ್‌ಮುನ್ ಧಮೇಚಾ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿದ್ದು, ವಿಚಾರಣೆ ನಂತರ ವಿಚಾರಣೆಯನ್ನು ಗುರುವಾರಕ್ಕೆ (ಅಕ್ಟೋಬರ್​ 28) ಮುಂದೂಡಲಾಗಿದೆ.
ಆರ್ಯನ್ ಪರ ವಕೀಲ ಮುಕುಲ್‌ ರೋಹ್ಟಗಿ ವಾದ ಮಾಡಿದ್ದಾರೆ. ಆರ್ಯನ್ ಖಾನ್ ಚಿಕ್ಕ ವಯಸ್ಸಿನ ಹುಡುಗನಾಗಿದ್ದಾನೆ. ಹಾಗಾಗಿ ಅವನನ್ನು ಜೈಲಿಗೆ ಕಳುಹಿಸುವ ಬದಲು ಪುನರ್ವಸತಿ ನಿಲಯಕ್ಕೆ ಕಳುಹಿಸಬೇಕು ಎಂದು ವಾದ ಮಾಡಿದರು.‘ಆರ್ಯನ್ ಖಾನ್‌ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಸೂಕ್ತ ಕಾರಣ ನೀಡದೇ ಬಂಧಿಸಲಾಗಿದೆ. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ’ ಎಂದು ಅವರು ವಾದ ಮಂಡನೆ ಮಾಡಿದರು.
ಅರ್ಬಾಜ್ ಪರ ವಕೀಲ ಅಮಿತ್ ದೇಸಾಯಿ ವಾದಮಂಡನೆ ಮಾಡಿದ್ದು, ‘ಅಕ್ಟೋಬರ್ 3ರಂದು ಸಣ್ಣ ಪ್ರಮಾಣದ ಡ್ರಗ್ಸ್ ಪತ್ತೆ, ಸೇವನೆ ಬಗ್ಗೆ ಆರೋಪ ಇದೆ. ಇದು 1 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗುವ ಪ್ರಕರಣ. ಆದ್ರೆ 41ಎ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಅಕ್ಟೋಬರ್ 3ರಂದು ಮೂವರ ಬಂಧನ ಕಾನೂನುಬಾಹಿರ’ ಎಂದು ವಕೀಲರು ವಾದಿಸಿದರು.
ಅರ್ಬಾಜ್ ಮರ್ಚೆಂಟ್ ಚರಸ್ ಸೇವಿಸಿದ್ದು ನಿಜ. ಜಾಮೀನು ಅರ್ಜಿ ವಿಚಾರಣೆ ವೇಳೆ ಅರ್ಬಾಜ್ ತಪ್ಪೊಪ್ಪಿಗೆ ಆಗಿದೆ. ಆದರೆ, ಅರ್ಬಾಜ್ ಡ್ರಗ್ಸ್‌ ಮಾರಾಟ, ಸಾಗಾಣಿಕೆ ಮಾಡಿಲ್ಲ. ಸೇವನೆ ಮಾಡುವ ಉದ್ದೇಶದಿಂದಲೇ ಚರಸ್ ಸಾಗಿಸಿದ್ದರು ಎಂದು ಪಿತೂರಿ ಆರೋಪ ಹೊರಿಸಲಾಗಿದೆ. ಈ ಆರೋಪಕ್ಕೆ ಸಾಕ್ಷ್ಯಗಳಿಲ್ಲ. ಬಂಧಿತ ಆರೋಪಿಗಳು ಪರಸ್ಪರ ಸಂಪರ್ಕದಲ್ಲಿ ಇರಲಿಲ್ಲ. ಅರ್ಬಾಜ್ ಮರ್ಚೆಂಟ್‌ಗೆ ಈವರೆಗೆ ಬ್ಲಡ್‌ ಟೆಸ್ಟ್‌ ಮಾಡಿಸಿಲ್ಲ ಎಂದು ಅಮಿತ್ ದೇಸಾಯಿ ವಾದ ಮಂಡಿಸಿದರು.
ಆರೋಪಿಗಳ ಪರವಾಗಿ ಮುಕುಲ್ ರೋಹಟಗಿ, ಅಮಿತ್ ದೇಸಾಯಿ ಮತ್ತು ಅಲಿ ಕಾಶಿಫ್ ಖಾನ್ ದೇಶಮುಖ್ ಅವರು ಮಾಡಿದ ವಾದಗಳಿಗೆ ಗುರುವಾರ ಉತ್ತರಿಸುವುದಾಗಿ ಎನ್‌ಸಿಬಿ ಪರವಾಗಿ ಹಾಜರಾದ ಎಎಸ್‌ಜಿ ಅನಿಲ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು. “ನಾನು ನನ್ನ ವಾದಗಳನ್ನು ಒಂದು ಗಂಟೆಯೊಳಗೆ ಮುಗಿಸಲು ಪ್ರಯತ್ನಿಸುತ್ತೇನೆ” ಎಂದು ಎಎಸ್‌ಜಿ ಸಿಂಗ್ ಹೇಳಿದರು. ಹೀಗಾಗಿ ಗುರುವಾರ ಮಧ್ಯಾಹ್ನ 2:30ರ ನಂತರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement