ಯಾವುದೇ ಕಾರಣಕ್ಕೂ ಕಣ್ಣಿನ ನಿರ್ಲಕ್ಷ್ಯ ಮಾಡಬೇಡಿ: ಡಾ. ಕಾತ್ಯಾಯಿನಿ

ಧಾರವಾಡ: ಕಣ್ಣು ಮಾನವನ ದೇಹದ ಅತಿ ಮುಖ್ಯ ಅಂಗ, ಪ್ರತಿ ದಿನ ನಮ್ಮ ಕಣ್ಣು ೨೫೦೦೦ ಬಾರಿ ಮಿಟುಕಿಸುತ್ತದೆ. ಕಣ್ಣಿನಿಂದಲೇ ನಾವು ಪ್ರಪಂಚದ ಆಗುಹೋಗುಗಳನ್ನು ನೋಡುತ್ತೇವೆ. ಕಣ್ಣಿಗೆ ಏನಾದರೂ ಸಮಸ್ಯೆ ಆದಲ್ಲಿ ನುರಿತ ತಜ್ಞರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಇಲ್ಲವಾದಲ್ಲಿ ಮುಂದೆ ಅಂಧಕಾರದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬರಬಹುದು ಎಂದು ಡಾ.ಕಾತ್ಯಾಯಿನಿ ಹೇಳಿದರು.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಡಿ.ಆರ್.ಎಚ್ ಸಭಾಭವನದಲ್ಲಿ ಧಾರವಾಡದ ಡಾ. ಎ.ಮ್ ಜೋಶಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಕಣ್ಣಿನ ಬಗ್ಗೆ ಮಾಹಿತಿ ನೀಡಿದರು.
ಕಣ್ಣಿನಲ್ಲಿ ಸುಮಾರು ೨ ಮಿಲಿಯನ್ ಕಾರ್ಯನಿರ್ವಹಣ ಭಾಗಗಳಿವೆ ಮತ್ತು ಇದರಿಂದಾಗಿ ಪ್ರತೀ ಗಂಟೆಯು ಸುಮಾರು ೩೬ ಸಾವಿರ ಮಾಹಿತಿಯು ರವಾನೆ ಆಗುತ್ತದೆ. ಇದರಲ್ಲಿ ತುಂಬಾ ಸಂಕೀರ್ಣ ಮಾರ್ಗ ಮತ್ತು ವ್ಯವಸ್ಥೆಗಳು ಇವೆ. ರೆಟಿನಾ, ಐರಿಸ್, ಲೆನ್ಸ್, ಕಾರ್ನಿಯಾ, ಸಿಲಿಯರಿ ಸ್ನಾಯುಗಳು ಮತ್ತು ಆಪ್ಟಿಕ್ ನರಗಳು ಇದರಲ್ಲಿವೆ. ವಯಸ್ಸಾದಂತೆಲ್ಲ ಕಣ್ಣಿನ ನರಗಳ ಶಕ್ತಿ ಕ್ಷೀಣಿಸಿ ಕಣ್ಣಿನ ತೊಂದರೆಗಳು ಕಾಣಿಕೊಳ್ಳುತ್ತವೆ. ಸಕ್ಕರೆ ಕಾಯಿಲೆ ಇದ್ದವರಂತು ಪ್ರತಿ ೬ ತಿಂಗಳಿಗೆ ಒಮ್ಮೆಯಾದರೂ ಪರೀಕ್ಷೆ ಮಾಡಿಸಬೇಕು ಎಂದ ಅವರು ಕಣ್ಣಿಗೆ ಬರುವ ರೋಗಗಳು ಯಾವವು ಮತ್ತು ಅವುಗಳಿಗೆ ಇರುವ ಪರಿಹಾರಗಳೇನು ಎಂಬುದನ್ನು ಪ್ರಾತಿಕ್ಷಿಕೆಯ ಮೂಲಕ ತಿಳಿಸಿದರು.
ಜೆ.ಎಸ್.ಎಸ್ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಆರೋಗ್ಯ ಕಾಳಜಿಗಾಗಿ ಮತ್ತು ಅವರಿಗೆ ಕಣ್ಣಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಶಿಬಿರವನ್ನು ಹಮ್ಮಿಕೊಂಡಿದ್ದು, ಡಾ. ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಪ್ರತಿವರ್ಷ ನಮ್ಮ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣೆ ಮಾಡುತ್ತ ಬಂದಿದೆ ಎಂದು ಡಾ. ಎಂ. ಎಂ ಜೋಶಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾಧಗಳನ್ನು ತಿಳಿಸಿದರು. ನೇತ್ರದಾನ ಮಾಡುವುದರಿಂದ ನಮ್ಮ ಕಣ್ಣುಗಳು ಮತ್ತೊಬ್ಬರ ಪಾಲಿಗೆ ದಾರಿದೀಪವಾಗಲಿದೆ. ಆದ್ದರಿಂದ ನೇತ್ರದಾನ ಮಾಡಬೇಕು ಎಂದರು.
ಮಹಾವೀರ ಉಪಾದ್ಯೆ ಸ್ವಾಗತಿಸಿ, ನಿರೂಪಿಸಿದರು, ಮಂಜುನಾಥ ಚಟ್ಟೇರ, ಶ್ರೀಮತಿ ದೀಪಾ ಪ್ರಾರ್ಥಿಸಿದರು. ಜಿನೇಂದ್ರ ಕುಂದಗೋಳ ವಂದಿಸಿದರು. ಡಾ. ಮಯಾಂಕ, ಜೆ.ಎಸ್.ಎಸ್ ನ ವಿವೇಕ ಲಕ್ಷ್ಮೇಶ್ವರ ಉಪಸ್ಥಿತರಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement