ಸಚಿವ ನವಾಬ್‌ ಮಲಿಕ್‌ ಟೀಕೆಗಳು ಎನ್‌ಸಿಬಿ-ವಾಂಖೇಡೆ ಸ್ಥೈರ್ಯಗೆಡಿಸುವ ಸಾಧ್ಯತೆ ಎಂದು ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್

ಮುಂಬೈ: ಮಾದಕವಸ್ತು ನಿಯಂತ್ರಣ ದಳ ಮತ್ತು ಅದರ ವಲಯ ನಿರ್ದೇಶಕ ಸಮೀರ್‌ ವಾಂಖೇಡೆ ಹಾಗೂ ಅವರ ಕುಟುಂಬಸ್ಥರ ಸ್ಥೈರ್ಯಗೆಡಿಸುವಂತಹ ಯಾವುದೇ ಹೇಳಿಕೆಗಳನ್ನು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ನವಾಬ್ ಮಲಿಕ್ ಅವರು ನೀಡದಂತೆ ನಿರ್ಬಂಧಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು ಬಾಂಬೆ ಹೈಕೋರ್ಟ್‌ನಲ್ಲಿ ದಾಖಲಾಗಿದೆ.
ಉದ್ಯಮಿ ಹಾಗೂ ಮೌಲಾನಾ ಆಗಿರುವ ಮುಂಬೈ ನಿವಾಸಿಯೊಬ್ಬರು ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದಾರೆ. ಅರ್ಜಿದಾರರು ಮಾದಕವಸ್ತು ವ್ಯಸನಿಗಳ ಪುನರ್ವಸತಿಗೆ ಶ್ರಮಿಸುತ್ತಿದ್ದಾರೆ. ಅರ್ಜಿಯನ್ನು ವಕೀಲ ಅಶೋಕ್ ಸರೋಗಿ ಅವರ ಮೂಲಕ ಸಲ್ಲಿಸಲಾಗಿದೆ.
ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಫಿಯಾಗಳು ಡ್ರಗ್ಸ್‌ ದಂಧೆ ನಡೆಸುತ್ತಿರುವ ಸಂದರ್ಭದಲ್ಲಿ ಎನ್‌ ಸಿಬಿಯಂತಹ ಸಂಸ್ಥೆಗಳು ಮಾಕವಸ್ತುಗಳ ಸೇವನೆಗೆ ಲಗಾಮು ಹಾಕುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನದಲ್ಲಿ ತೊಡಗಿವೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್‌ ಸಾವಿನ ನಂತರ ಅನೇಕ ತನಿಖೆಗಳು ಆರಂಭಗೊಂಡವು. ಎನ್‌ಸಿಬಿ, ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮುಂತಾದ ಸಂಸ್ಥೆಗಳು ಪ್ರಮುಖವಾಗಿ ತನಿಖೆ ಕೈಗೊಂಡವು. “ಇವುಗಳಲ್ಲೆಲ್ಲಾ ಸಮೀರ್ ವಾಂಖೇಡೆ ಅಧಿಕಾರಿಯ ಉಸ್ತುವಾರಿಯಲ್ಲಿ ಎನ್‌ಸಿಬಿಯು ಹೆಚ್ಚು ಪರಿಣಾಮಕಾರಿಯಾಗಿ ಮೂಡಿದೆ,” ಎಂದು ಅರ್ಜಿದಾರರು ತಿಳಿಸಿದ್ದಾರೆ.
ಒಂದು ವೇಳೆ ನವಾಬ್‌ ಮಲಿಕ್‌ ಅವರಿಗೆ ವಾಂಖೇಡೆ ಅವರ ವಿರುದ್ಧ ಯಾವುದಾದರೂ ದೂರುಗಳಿದ್ದರೆ ಅದನ್ನು ಅವರು ಪರಿಹರಿಸಿಕೊಳ್ಳಲು ಕಾನೂನಾತ್ಮಕವಾಗಿ ಮುಂದಾಗಬೇಕು. ಅದರೆ, ಮಲಿಕ್ ಅವರು ವಾಂಖೇಡೆ ಮತ್ತು ಅವರ ತಂಗಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. “ವಾಕ್‌ ಸ್ವಾಂತ್ರ್ಯವನ್ನು ಮತ್ತೊಬ್ಬರ ಸ್ಥೈರ್ಯಗೆಡಿಸಲು ಬಳಸಿಕೊಳ್ಳಲಾಗದು” ಎಂದು ಅರ್ಜಿದಾರರು ಹೇಳಿದ್ದಾರೆ.
ನವಾಬ್‌ ಮಲಿಕ್ ಅವರ ಹೇಳಿಕೆಗಳು ಕ್ರೂಸ್‌ ಹಡಗಿನಿಂದ ವಶಪಡಿಸಿಕೊಳ್ಳಲಾದ ಮಾದಕವಸ್ತು ಪ್ರಕರಣದ ತನಿಖೆ ಕೈಗೊಂಡಿರುವ ಸಮೀರ್ ಅವರನ್ನು ಅಧೀರರನ್ನಾಗಿಸಲು ಮಾಡಿದಂತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರಕರಣವನ್ನು ವಕೀಲ ಅಶೋಕ್‌ ಸರೋಗಿ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಹಾಗೂ ನ್ಯಾ. ಎಂ ಎಸ್ ಕಾರ್ಣಿಕ್ ಅವರ ಪೀಠದ ಮುಂದೆ ಪ್ರಕರಣವನ್ನು ಪ್ರಸ್ತಾಪಿಸಿದರು. ಈ ವೇಳೆ ಪೀಠವು ಅವರನ್ನು ರಜಾಕಾಲೀನ ಪೀಠಕ್ಕೆ ಹೋಗುವಂತೆ ಇಲ್ಲವೇ ಕೋರ್ಟ್‌ಗಳು ಯಥಾಪ್ರಕಾರ ಕಾರ್ಯನಿರ್ವಹಿಸುವವರೆಗೆ ಕಾಯುವಂತೆ ಸೂಚಿಸಿತು.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement