ಉತ್ತರಪ್ರದೇಶ ಚುನಾವಣೆ ಎಫೆಕ್ಟ್​; 30 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ…!

ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷವು (ಬಿಜೆಪಿ) ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕೇಸರಿ ಪಕ್ಷವು ತನ್ನ 30 ಲಕ್ಷ ಬೂತ್ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ಕಳುಹಿಸಿದೆ ಎಂದು ವರದಿಯಾಗಿದೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೂತ್ ನಿರ್ವಹಣೆಗೆ ಒತ್ತು ನೀಡಿ ಬೂತ್ ಮಟ್ಟದ ಕಾರ್ಯಕರ್ತರ ಮನೆಗೆ ತೆರಳಿ ಊಟ ಮಾಡಿ ಕೌಟುಂಬಿಕ ವಾತಾವರಣ ನಿರ್ಮಿಸಲು ಯತ್ನಿಸಿದ್ದರು. ಅಮಿತ್ ಶಾ ಅವರು ರಾಜ್ಯದ ಪ್ರತಿ ಪ್ರದೇಶದಲ್ಲಿ ಬೂತ್ ಮಟ್ಟದ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಈಗ ಪಕ್ಷವು ಬೂತ್ ಮಟ್ಟದ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ಕಳುಹಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಲಖನೌಗೆ ಭೇಟಿ ನೀಡುತ್ತಿದ್ದು, ಅವರ ಸಭೆಯೂ ನಡೆದಿದೆ. ರಾಜ್ಯದಲ್ಲಿ ಒಂದು ಲಕ್ಷದ 63 ಸಾವಿರ ಬೂತ್‌ಗಳಿದ್ದು, 1.5 ಲಕ್ಷಕ್ಕೂ ಹೆಚ್ಚು ಬೂತ್‌ಗಳಲ್ಲಿ ಬಿಜೆಪಿ 20-20 ಸದಸ್ಯರ ಸಮಿತಿಯನ್ನು ರಚಿಸಿದೆ. ರಾಜ್ಯದಲ್ಲಿ ಬಿಜೆಪಿ 30 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಕಾರ್ಯಕರ್ತರನ್ನು ಹೊಂದಿದೆ. ಪಈ ಬಾರಿ ಬಾಗಿಲಿಗೆ ಹಾಕುವ ತೋರಣಗಳು ಮತ್ತು ಕಮಲದ ಆಕಾರದ ಮಣ್ಣಿನ ದೀಪವನ್ನು ಒಳಗೊಂಡಿರುವ ಉಡುಗೊರೆ ಪೆಟ್ಟಿಗೆಗಳನ್ನು ಉತ್ತರ ಪ್ರದೇಶದ ಎಲ್ಲಾ ಬೂತ್ ಸಮಿತಿಗಳ ಸದಸ್ಯರಿಗೆ ಕಳುಹಿಸಲಾಗಿದೆ.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ವಿಜಯ್ ಬಹದ್ದೂರ್ ಪಾಠಕ್ ಗುರುವಾರ ಮಾತನಾಡಿ, ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದು, ಬಿಜೆಪಿ ಕುಟುಂಬದಲ್ಲಿ ಬೂತ್ ಕಾರ್ಯಕರ್ತರು ಪ್ರಮುಖ ಕೊಂಡಿಯಾಗಿದ್ದಾರೆ. ದೀಪಾವಳಿಯಂದು ಉಡುಗೊರೆ ನೀಡುವ ಸಂಪ್ರದಾಯ ಇರುವುದರಿಂದ ಪಕ್ಷವು 30 ಲಕ್ಷಕ್ಕೂ ಹೆಚ್ಚು ಬೂತ್ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆಗಳನ್ನು ಕಳುಹಿಸಿದೆ ಎಂದು ತಿಳಿಸಿದ್ದಾರೆ.
ಈ ಉಡುಗೊರೆಗಳು ಚುನಾವಣಾ ಪ್ರಚಾರದ ಭಾಗವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಪಾಠಕ್, “ಸದ್ಯಕ್ಕೆ ಪಕ್ಷದ ಪ್ರಮುಖ ಗಮನವೇ 2022 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಾಗಿದೆ. ಹೀಗಾಗಿ ಜನರ ಬಳಿಗೆ ಚುನಾವಣಾ ಚಿಹ್ನೆಯನ್ನು ತೆಗೆದುಕೊಂಡು ಹೋಗುವುದು ಸಹಜ ಪ್ರಕ್ರಿಯೆ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement