ಬಂಧನಕ್ಕೂ 3 ದಿನ ಮೊದಲು ಸಮೀರ್ ವಾಂಖೆಡೆಗೆ ನೋಟಿಸ್: ಬಾಂಬೆ ಹೈಕೋರ್ಟ್‌ಗೆ ಮುಂಬೈ ಪೊಲೀಸರ ಭರವಸೆ

ಮುಂಬೈ: ಕ್ರೂಸ್‌ ಹಡಗು ಡ್ರಗ್ಸ್‌ ಪ್ರಕರಣಕ್ಕೆ ತಳಕು ಹಾಕಿಕೊಂಡಿರುವ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್‌ ವಾಂಖೇಡೆ ಅವರನ್ನು ಬಂಧಿಸುವ ಮೂರು ದಿನಗಳಿಗೂ ಮುನ್ನ ಅವರಿಗೆ ನೋಟಿಸ್‌ ನೀಡಲಾಗುವುದು ಎಂದು ಮುಂಬೈ ಪೊಲೀಸರು ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪೊಲೀಸರು ನೀಡಿದ ಭರವಸೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿಗಳಾದ ನಿತಿನ್ ಜಾಮ್‌ದಾರ್ ಮತ್ತು ಎಸ್‌. ವಿ. ಕೊತ್ವಾಲ್ ಅವರಿದ್ದ ಪೀಠ ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಪ್ರಕರಣದ ತನಿಖೆ ವರ್ಗಾಯಿಸುವಂತೆ ಕೋರಿ ವಾಂಖೇಡೆ ಸಲ್ಲಿಸಿದ್ದ ಮನವಿಯನ್ನು ವಿಲೇವಾರಿ ಮಾಡಿತು.
ಬಂಧನಕ್ಕೆ ಮೂರು ಕೆಲಸದ ಅವಧಿಯ ದಿನಗಳು ಇರುವಂತೆ ನೋಟಿಸ್‌ ನೀಡಲಾಗುವುದು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಭರವಸೆ ನೀಡಿದ್ದಾರೆ. ಬಳಿಕ ಅರ್ಜಿ ವಿಲೇವಾರಿ ಮಾಡಲು ಮುಂದಾದ ನ್ಯಾಯಾಲಯ ಪ್ರಕರಣದ ಅರ್ಹತೆಯ ಕುರಿತಾಗಿ ತಾನು ಯಾವುದೇ ತೀರ್ಪು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
ವಾಂಖೇಡೆ ವಿರುದ್ಧ ಕೇಳಿಬಂದಿರುವ ಸುಲಿಗೆ ಮತ್ತು ಭ್ರಷ್ಟಾಚಾರ ಆರೋಪಗಳ ತನಿಖೆಗಾಗಿ ಮುಂಬೈ ಪೊಲೀಸರು ಇಂದು ಬೆಳಿಗ್ಗೆಯಷ್ಟೇ 4 ಸದಸ್ಯರ ತಂಡ ರಚಿಸಿದ್ದರು.
ವಾಂಖೇಡೆ ಪರ ಹಾಜರಾದ ಹಿರಿಯ ವಕೀಲ ಅತುಲ್ ನಂದಾ, ವಕೀಲರಾದ ಸುಜಯ್ ಕಾಂತಾವಾಲಾ ಹಾಗೂ ರಮೀಜಾ ಹಕೀಮ್ ಅವರು “ಹೈಕೋರ್ಟ್‌ನಲ್ಲಿ ವಿಷಯ ಪ್ರಸ್ತಾಪಿಸಿ ವಾಂಖೇಡೆ ಅವರನ್ನು ಮುಂಬೈ ಪೊಲೀಸರು ಬಂಧಿಸಲಿದ್ದಾರೆ” ಎಂದು ಹೇಳಿದ್ದರು.
ಮುಂಬೈ ಪೊಲೀಸರು ಇಂದು ನನ್ನನ್ನು ಬಂಧಿಸುತ್ತಾರೆ ಎಂಬುದು ನನ್ನ ಆತಂಕವಾಗಿದೆ. ಸರ್ಕಾರ ನನ್ನ ಹಕ್ಕುಗಳನ್ನು ಕಸಿದುಕೊಳ್ಳುವವರೆಗೆ ನ್ಯಾಯಮೂರ್ತಿಗಳು ಕಾಯಬಾರದು” ಎಂದು ವಾಂಖೇಡೆ ಪರವಾಗಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಮೂರ್ತಿಗಳು ನನ್ನ ಹಕ್ಕುಗಳನ್ನು ರಕ್ಷಿಸಬೇಕು. ನಾನು ಮಾದಕವಸ್ತು ಸಾಗಾಟಗಾರನಲ್ಲ. ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಬೇಕು. ಪೊಲೀಸ್ ಕಾಯಿದೆ ಉಲ್ಲಂಘಿಸಿ ತನಿಖೆ ಆರಂಭಿಸಲಾಗಿದೆ” ಎಂದು ವಾಖೇಡೆ ಪರ ವಕೀಲರು ವಾದಿಸಿದರು.
ಇದನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರೋಧಿಸಿದರು. “ಮುಂಬೈ ಪೊಲೀಸರು ಈಗಷ್ಟೇ ವಿಚಾರಣೆ ಆರಂಭಿಸಿದ್ದು ವಾಂಖೇಡೆ ಅವರ ಮನವಿ ಅಕಾಲಿಕವಾಗಿದೆ. ನಾವು ಸ್ವೀಕರಿಸಿದ ದೂರು ವ್ಯಕ್ತಿಗಳ ವಿರುದ್ಧವಾಗಿಲ್ಲ. ಇಂದಿನವರೆಗೆ ಮುಂಬೈ ಪೊಲೀಸರು ಎನ್‌ಸಿಬಿ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಿಲ್ಲ” ಎಂದು ಹೇಳಿದರು.
ಅಧಿಕಾರಿಯ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿಕೆ ನೀಡುವಂತೆ ನ್ಯಾಯಾಲಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರನ್ನು ಕೇಳಿತು. ಅದರಂತೆ ಯಾವುದೇ ಕ್ರಮ ತೆಗೆದುಕೊಳ್ಳುವ 3 ದಿನಗಳ ಮೊದಲು ನೋಟಿಸ್‌ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.

ಪ್ರಮುಖ ಸುದ್ದಿ :-   ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ...?

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement