ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಪೂರ್ವನಿಯೋಜಿತ ಕೃತ್ಯ: ತಪ್ಪಿತಸ್ಥರ ಮೇಲೆ ತಕ್ಷಣವೇ ಕ್ರಮಕ್ಕೆ ಆರ್‌ಎಸ್‌ಎಸ್‌ ಒತ್ತಾಯ

ಧಾರವಾಡ:: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಏಕಾಏಕಿ ನಡೆದಿದ್ದಲ್ಲ. ಇದೊಂದು ಪೂರ್ವನಿಯೋಜಿತ ಕೃತ್ಯಗಿದ್ದು, ಅಲ್ಲಿನ ಸರ್ಕಾರ ತಕ್ಷಣ ತಪ್ಪಿತಸ್ಥರು ಮತ್ತು ಇದರ ಹಿಂದಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೈಠಕ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಅರುಣಕುಮಾರ ತಿಳಿಸಿದರು.
ನಗರದ ಗರಗ ರಸ್ತೆಯಲ್ಲಿರುವ ರಾರಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುರುವಾರದಿಂದ ಆರಂಭವಾದ ಮೂರು ದಿನಗಳ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್‌ನ ಮೊದಲ ದಿನದಲ್ಲಿ ನಡೆದ ಚರ್ಚೆ ಹಾಗೂ ನಿರ್ಣಗಳ ಬಗ್ಗೆ ಮಾಹಿತಿ ನೀಡಿದ ಅವರು, ಸಣ್ಣಪುಟ್ಟ ವಿಷಯಗಳಿಗೆ ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತುತ್ತಿದ್ದ ಮಾನವ ಹಕ್ಕುಗಳ ರಕ್ಷಣೆ ಹೋರಾಟಗಾರರು ಹಾಗೂ ವಿವಿಧ ಸಂಘ ಸಂಸ್ಥೆಗಳು ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆದ ಹಲ್ಲೆಯ ಸಂದರ್ಭದಲ್ಲಿ ಎಲ್ಲಿದ್ದವು ಎಂದು ಪ್ರಶ್ನಿಸುವ ಅನಿವಾರ್ಯತೆ ಇದೆ. ಅಲ್ಲದೇ ಭಾರತ ಸರ್ಕಾರ ಸೇರಿದಂತೆ ಜಾಗತಿಕ ಮಟ್ಟದ ಸಂಘ, ಸಂಸ್ಥೆಗಳು ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಬೇಕು ಹಾಗೂ ಬಾಂಗ್ಲಾ ಸರ್ಕಾರ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾದಲ್ಲಿ ೧೯೪೭ರಲ್ಲಿ ಶೇ. ೨೮ರಷ್ಟಿದ್ದ ಹಿಂದುಗಳ ಸಂಖ್ಯೆ ಈಗ ಶೇ. ೮ಕ್ಕೆ ಕುಸಿದಿದೆ. ಇದು ಕಳವಳಕಾರಿ. ಹಿಂದುಗಳ ನಿರ್ಮೂಲನೆ ಮಾಡುವ ಉದ್ದೇಶದಿಂದಲೇ ಹಿಂದುಗಳ ಮೇಲೆ ಯೋಜನಾಬದ್ಧವಾಗಿ ದೌರ್ಜನ್ಯ ನಡೆಸಲಾಗುತ್ತಿದೆ. ಇಂತ ಸಂದರ್ಭದಲ್ಲಿ ಜಾಗತಿಕ ಹಿಂದು ಸಮುದಾಯ ಅಲ್ಲಿನ ಹಿಂದೂಗಳ ಜೊತೆಗಿದೆ. ಹಾಗೆಯೇ ಬಾಂಗ್ಲಾದಲ್ಲಿನ ಹಿಂದೂ, ಬೌದ್ಧ ಹಾಗೂ ಇನ್ನಿತರ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಗೆ ಭಾರತ ಸರ್ಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರುವಂತೆ ಇತರ ರಾಷ್ಟ್ರಗಳ ಮನವೊಲಿಸಬೇಕು ಎಂಬುದರ ಕುರಿತು ಚರ್ಚಿಸಲಾಯಿತು ಎಂದು ಮಾಹಿತಿ ನೀಡಿದರು.
ದೇಶ ವಿಭಜನೆ ನಂತರ ಬಾಂಗ್ಲಾದಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಜಮಾತೆ ಇಸ್ಲಾಮ್‌ನಂತ ಸಂಘಟನೆಗಳು ಹಿಂದೂ ಧರ್ಮವನ್ನೇ ಸರ್ವನಾಶ ಮಾಡುವ ವ್ಯವಸ್ಥಿತ ತಂತ್ರ ಮಾಡುತ್ತಲೇ ಬರುತ್ತಿವೆ. ವಿಶ್ವದ ಯಾವುದೇ ರಾಷ್ಟ್ರದಲ್ಲಿ ಈ ರೀತಿಯ ಸಂಘಟನೆಗಳಿದ್ದಲ್ಲಿ ಆ ರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಇದು ಮಾರಕ ಎಂದು ಕಳವಳ ವ್ಯಕ್ತವಾಯಿತು.ವಿಶ್ವದ ವಿವಿಧ ದೇಶಗಳಲ್ಲಿ ವಾಸವಾಗಿರುವ ಹಿಂದುಗಳು ಬಾಂಗ್ಲಾ ದೇಶದಲ್ಲಿ ನಡೆದ ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಬೇಕು. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರಬೇಕು. ಒಂದೊಮ್ಮೆ ಈ ರೀತಿ ಆದರೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾದವು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

ತ್ರಿಪುರದಲ್ಲಿ ನಡೆಯುತ್ತಿರುವ ಘಟನೆಗೂ ಮತ್ತು ಬಾಂಗ್ಲಾ ಘಟನೆಗೂ ಹೋಲಿಕೆ ಮಾಡುವುದು ತಪ್ಪು. ತ್ರಿಪುರದಲ್ಲಿ ನಡೆದ ಘಟನೆಯಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಖಿಲ ಭಾರತ ಪ್ರಚಾರ ಪ್ರಮುಖ ಸುನೀಲ ಅಂಬೇಕರ, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ ನರೇಂದ್ರಕುಮಾರ ಠಾಕೂರ, ಅಲೋಕಕುಮಾರ ಉಪಸ್ಥಿತರಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement