ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ ಸಂಪೂರ್ಣ ಕಪ್ಪುಬಣ್ಣಕ್ಕೆ ತಿರುಗಿದ ನದಿ; ಲಕ್ಷಾಂತರ ಮೀನುಗಳು ಸಾವು

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ನದಿಯೇ ಪೂರ್ತಿ ಕಪ್ಪುಬಣ್ಣಕ್ಕೆ ತಿರುಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಲಕ್ಷಾಂತರ ಮೀನುಗಳು ಮೃತಪಟ್ಟಿವೆ.
ಈ ನದಿಯಲ್ಲಿ ಮೀನು ಹಿಡಿದು ತಿನ್ನಬೇಡಿ.. ನದಿ ನೀರು ಕುಡಿಯಬೇಡಿ ಎಂದು ಸ್ಥಳೀಯರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ನದಿ ನೀರು ಹೀಗಾಗಲು ಇದರಲ್ಲಿ ಭಾರೀ ಪ್ರಮಾಣದ ವಿಷಯುಕ್ತ ಅಂಶ ಕರಗಿದ್ದು (ಟಿಡಿಎಸ್​) ಕಾರಣ ಎಂದು ಜಿಲ್ಲಾಡಳಿತ ತಿಳಿಸಿದೆ.
ಅರುಣಾಚಲ ಪ್ರದೇಶದ ಪೂರ್ವ ಕಮೇಂಗ್​ ಜಿಲ್ಲೆಯಲ್ಲಿ ಹರಿಯುತ್ತಿರುವ ಕಮೇಂಗ್​​ ನದಿ ನೀರು ಈಗ ಕಪ್ಪಾಗಿದೆ. ಇಲ್ಲಿನ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ನದಿ ನೀರನ್ನು ಪರಿಶೀಲಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಕರಗಿರುವ ವಿಷಯುಕ್ತ ವಸ್ತುವಿನಿಂದಾಗಿ ಮೀನುಗಳು ಉಸಿರುಗಟ್ಟಿ ಸತ್ತಿವೆ ಎಂದು ಅವರು ಹೇಳಿದ್ದಾರೆ. ನದಿಯಲ್ಲಿ ಲೀಟರ್​​ಗೆ ಸಾಮಾನ್ಯವಾಗಿ 300-1200 ಎಂಜಿಗಳಷ್ಟು ಟಿಡಿಎಸ್​ ಇರಬೇಕು. ಅದಕ್ಕಿಂತ ಹೆಚ್ಚಾದರೆ ನದಿ ನೀರು ವಿಷಯುಕ್ತಗೊಳ್ಳುತ್ತದೆ. ಆದರೆ ಕಮೇಂಗ್​ ನದಿಯಲ್ಲಿ ಪ್ರತಿ ಲೀಟರ್​ಗೆ 6800 ಎಂಜಿಗಳಷ್ಟಾಗಿದೆ ಅಂದರೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ ಹಲಿ ತಾಜೋ ತಿಳಿಸಿದ್ದಾರೆ.
ಸ್ಥಳೀಯರಿಂದ ಚೀನಾ ವಿರುದ್ಧ ಆರೋಪ…
ಗಡಿಗಳಲ್ಲಿ ಚೀನಾ ಹಳ್ಳಿಗಳನ್ನೇ ನಿರ್ಮಾಣ ಮಾಡುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಿದೆ. ಈ ವರದಿಗಳ ಮಧ್ಯೆಯೇ ಗಡಿ ಭಾಗದಲ್ಲಿ ಹರಿಯುವ ನದಿ ನೀರಿನ ಬಣ್ಣವೂ ಸಂಪೂರ್ಣ ಕಪ್ಪಾಗಿದೆ. ಕಳೆದ ಕೆಲವು ವಾರಗಳಿಂದಲೂ ಅರುಣಾಚಲ ಪ್ರದೇಶದಲ್ಲಿ ಚೀನಾ ಪೀಪಲ್ಸ್​ ಲಿಬರೇಶನ್​ ಆರ್ಮಿಯ ಕಾರಣದಿಂದಾಗಿ ಭಾರತದ ಸೇನೆ ತನ್ನ ಗಸ್ತು ಹೆಚ್ಚಳ ಮಾಡಿದೆ.
ನದಿ ನೀರು ಕಪ್ಪಾಗಿ ಕಲುಷಿತಗೊಳ್ಳಲು ಚೀನಾ ಕಾರಣ ಎಂದು ಸ್ಥಳೀಯ ಸೆಪ್ಪಾ ಗ್ರಾಮಸ್ಥರು ಆರೋಪಿಸಿದ್ದಾರೆ. ಚೀನಾದಿಂದ ಗಡಿಯಾದ್ಯಂತ ಮಿತಿಮೀರಿ ಕಟ್ಟಡಗಳ ನಿರ್ಮಾಣ ಮಾಡುತ್ತಿದೆ. ಹೀಗಾಗಿ ನದಿಯಲ್ಲಿ ಟಿಡಿಎಸ್​ ಪ್ರಮಾಣ ಅಧಿಕಗೊಂಡಿದೆ. ಕಮೇಂಗ್​ ನದಿ ವಿಷಯುಕ್ತಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಸ್ಥಿತಿ ಹೀಗೆ ಮುಂದುವರಿದರೆ ಈ ನದಿಯಲ್ಲಿರುವ ಎಲ್ಲ ಜಲಚರಗಳೂ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ನಾಶ ಆಗಲಿದೆ ಎಂದೂ ಆತಂಕ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ಬಾಬಾ ರಾಮದೇವ ಕಂಪನಿ ತಯಾರಿಸಿದ 14 ಔಷಧಗಳ ತಯಾರಿಕಾ ಪರವಾನಗಿ ಅಮಾನತು ಮಾಡಿದ ಉತ್ತರಾಖಂಡ ಸರ್ಕಾರ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement