ಹವಲಾ ಪ್ರಕರಣ: ಇಡಿ ಸಮನ್ಸ್‌ ವಜಾ ಮಾಡುವಂತೆ ಕೋರಿದ್ದ ಅನಿಲ್‌ ದೇಶಮುಖ್‌ ಅರ್ಜಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

ಮುಂಬೈ: ಹವಾಲಾ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ಗಳನ್ನು ವಜಾ ಮಾಡುವಂತೆ ಕೋರಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿದೆ.
ಸಿಆರ್‌ಪಿಸಿ ಸೆಕ್ಷನ್‌ 438ರ ಅಡಿ ಅರ್ಜಿದಾರರು ಶಾಸನಬದ್ಧವಾಗಿ ಸಕ್ಷಮ ನ್ಯಾಯಾಲಯದ ಕದತಟ್ಟಲು ಮತ್ತು ನ್ಯಾಯಾಲಯವು ಅರ್ಹತೆಯ ಆಧಾರದಲ್ಲಿ ಪರಿಗಣಿಸುವ ಸಂಬಂಧ ಅದನ್ನು ಮುಕ್ತವಾಗಿಸಲಾಗಿದೆ” ಎಂದು ನ್ಯಾಯಮೂರ್ತಿಗಳಾದ ನಿತಿನ್‌ ಜಾಮ್ದಾರ್‌ ಮತ್ತು ಎಸ್‌ ವಿ ಕೊತ್ವಾಲ್‌ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.
ದೊಡ್ಡಮಟ್ಟದ ಹವಾಲಾ ಹಣವು ದೇಶದ ಆರ್ಥಿಕ ಹಿತಾಸಕ್ತಿಗೆ ಮಾರಕವಾಗುತ್ತದೆ. ಹವಾಲಾ ಹಣ ಎಂಬ ಪೀಡೆಯು ಅಂತಾರಾಷ್ಟ್ರೀಯವಾಗಿ ಸಂಕೀರ್ಣ ಪರಿಣಾಮಗಳನ್ನು ಹೊಂದಿದೆ. ಕಾನೂನಿನ ನಿಬಂಧನೆಯನ್ನು ತನಿಖೆಯು ಎಲ್ಲಿಯವರೆಗೆ ಉಲ್ಲಂಘಿಸುವುದಲ್ಲಿವೋ ಅಲ್ಲಿಯವರೆಗೆ ಅದರ ಮೇಲೆ ನಿಗಾ ಇಡುವುದು ನ್ಯಾಯಾಲಯದ ಕೆಲಸವಲ್ಲ. ತನಿಖೆಯ ಗತಿಯ ಬಗ್ಗೆ ತೀರ್ಮಾನಿಸುವುದನ್ನು ವಿಚಾರಣಾ ಸಂಸ್ಥೆಗಳಿಗೆ ಬಿಡುವುದು ಸೂಕ್ತ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯವು ತನಿಖೆ ಮತ್ತು ವಿಚಾರಣೆಯ ಪ್ರತಿ ಹಂತದಲ್ಲೂ ಮಧ್ಯಪ್ರವೇಶ ಮಾಡುವುದರಿಂದ ಅದು ವಿಚಾರಣೆಯ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತದೆ. ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಲು ತನಿಖಾ ಸಂಸ್ಥೆಗಳಿಗೆ ಅವಕಾಶ ನೀಡಬೇಕು” ಎಂದು ಪೀಠ ಹೇಳಿದೆ.
ಭ್ರಷ್ಟಾಚಾರ ಮತ್ತು ತಮ್ಮ ಸ್ಥಾನದ ದುರ್ಬಳಕೆಗೆ ಸಂಬಂಧಿಸಿದಂತೆ ದೇಶಮುಖ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನ್ಯಾಯಾಲಯ ನಿರ್ದೇಶಿಸಿದ ಬೆನ್ನಿಗೇ ಜಾರಿ ನಿರ್ದೇಶನಾಲಯವು ಮಾಜಿ ಗೃಹ ಸಚಿವರು ಮತ್ತು ಅವರ ಸಂಬಂಧಿಕರ ವಿರುದ್ಧ ತನಿಖೆ ಮುಂದಾಗಿತ್ತು.
ಸೇವೆಯಿಂದ ಅಮಾನತಾಗಿದ್ದ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಮುಂಬೈ ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಂದ ಹಣ ಸಂಗ್ರಹಿಸುವಂತೆ ಆದೇಶಿಸುವ ಮೂಲಕ ಗೃಹ ಸಚಿವರಾಗಿದ್ದ ದೇಶಮುಖ್‌ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಜಾರಿ ನಿರ್ದೇಶನಾಲಯ ಆಪಾದಿಸಿತ್ತು. ಸುಲಿಗೆ ಮಾಡಲಾದ ಹವಾಲಾ ಹಣವನ್ನು ನಾಗಪುರ ಮೂಲದ ತಮ್ಮ ಕುಟುಂಬ ಸದಸ್ಯರು ನಿರ್ವಹಿಸುತ್ತಿದ್ದ ಟ್ರಸ್ಟ್‌ಗೆ ವರ್ಗಾವಣೆ ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯ ದೂರಿದೆ.

ಪ್ರಮುಖ ಸುದ್ದಿ :-   ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement