ಪಟಾಕಿಗಳ ಬಳಕೆ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಪಟಾಕಿಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸುವ ಕೋಲ್ಕತ್ತಾ ಹೈಕೋರ್ಟ್‌ನ ಇತ್ತೀಚಿನ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ಅವರಿದ್ದ ವಿಶೇಷ ರಜಾಕಾಲದ ಪೀಠವು ಮಾಲಿನ್ಯಕಾರಕ ವಸ್ತುಗಳನ್ನು ಬಳಸುವ ಪಟಾಕಿಗಳ ಬಳಕೆಯನ್ನು ನಿಯಂತ್ರಿಸುವ ಆದೇಶವನ್ನು ಸುಪ್ರೀಂ ಕೋರ್ಟ್ ಈಗಾಗಲೇ ಜಾರಿಗೊಳಿಸಿದೆ ಮತ್ತು ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದು ಹೇಳಿದೆ.
ಕೋವಿಡ್ ಸಾಂಕ್ರಾಮಿಕ ಹಾಗೂ ವಾಯುಮಾಲಿನ್ಯದ ನಡುವೆ ಪಟಾಕಿ ಸಂಪೂರ್ಣ ನಿಷೇಧಿಸುವಂತೆ ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಟಾಕಿ ಉತ್ಪಾದಿಸುವ ಕಂಪನಿಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು.
ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಆಗುವುದಿಲ್ಲ. ದುರುಪಯೋಗವನ್ನು ತಡೆಯಲು ಕಾರ್ಯವಿಧಾನವನ್ನು ಬಲಪಡಿಸಿ ಎಂದು ಸುಪ್ರೀಂಕೋರ್ಟ್‌ ಆದೇಶದಲ್ಲಿ ತಿಳಿಸಿದೆ.
ಪೀಠವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿಷೇಧಿತ ಪಟಾಕಿ ಮತ್ತು ಸಂಬಂಧಿತ ವಸ್ತುಗಳನ್ನು ರಾಜ್ಯದಲ್ಲಿ ಆಮದು ಮಾಡಿಕೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳುವ ಸಾಧ್ಯತೆ ಕುರಿತು ಪರಿಶೀಲಿಸುವಂತೆ ಸೂಚಿಸಿತು.
ಹಸಿರು ಪಟಾಕಿಗಳ ಬಗ್ಗೆ ಸುಪ್ರೀಂ ಕೋರ್ಟ್‍ನ ಮೂರು ಆದೇಶಗಳು ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಎರಡು ಆದೇಶಗಳ ಹೊರತಾಗಿಯೂ ಕೋಲ್ಕತ್ತಾ ಹೈಕೋರ್ಟ್ ಹಸಿರು ಪಟಾಕಿಗಳನ್ನು ನಿಷೇಧಿಸಿದೆ. ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಉತ್ತಮವಾಗಿದ್ದರೆ ಹಸಿರು ಪಟಾಕಿಗಳನ್ನು ಬಳಸಲು ಅನುಮತಿ ನೀಡುಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಗಳು ಹೇಳುತ್ತವೆ ಎಂದು ಪಟಾಕಿ ತಯಾಕರ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಭಟ್ನಾಗರ್ ಹೇಳಿದರು.
ಪರಿಸರ ಸಂರಕ್ಷಣೆ ಹಾಗೂ ಜನರ ಹಕ್ಕುಗಳ ರಕ್ಷಣೆ ಉದ್ದೇಶದಿಂದ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧಿಸುವಂತೆ ಕೋರಿ ಪರಿಸರ ಕಾರ್ಯಕರ್ತೆ ರೋಶನಿ ಅಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಕೋಲ್ಕತ್ತಾ ಹೈಕೋರ್ಟಿನಿಂದ ಆದೇಶ ಬಂದಿತ್ತು.
ಕೋಲ್ಕತ್ತಾವು ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ವಾಯುಮಾಲಿನ್ಯ ಮಟ್ಟವನ್ನು ದಾಖಲಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಕಾಶ್ಮೀರ ; ಪುಲ್ವಾಮಾ ಎನ್ಕೌಂಟರಿನಲ್ಲಿ ಮೂವರು ಭಯೋತ್ಪಾದಕರ ಹತ್ಯೆ ; ಒಬ್ಬನ ಕೊನೆಯ ಕ್ಷಣ ಡ್ರೋನ್ ನಲ್ಲಿ ಸೆರೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement