ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಬದಲಾಯಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಬೆಂಗಳೂರು: ಕನ್ನಡವನ್ನು ರಾಜ್ಯದ ಗಡಿಯೊಳಗೆ ಸೀಮಿತವಾಗಿ ನೋಡುತ್ತಿಲ್ಲ. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಗಡಿ ವಿವಾದಗಳು ಇದ್ದಾಗಲೂ ನಾವು ಅದನ್ನು ಮುಂಬೈ ಕರ್ನಾಟಕ ಎಂದು ಹೇಳಬಾರದು. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಸಾರ್ವಜನಿಕ ಇಲಾಖೆಯು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿರುವ ಅವರು, ಕರ್ನಾಟಕದ ಯಾವುದೇ ಪ್ರದೇಶ ಹಿಂದುಳಿಯಲು ಬಿಡುವುದಿಲ್ಲ. ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇವೆ. ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕು‌ ಅದಕ್ಕಾಗಿ ಕಲ್ಯಾಣ ಕರ್ನಾಟಕಕ್ಕೆ ಮುಂದಿನ ಬಜೆಟ್ ನಲ್ಲಿ ರೂ.3000 ಕೋಟಿ ವಿಶೇಷ ಅನುದಾನ ಒದಗಿಸಲಾಗುವುದು. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಬದಲಾಯಿಸಲು ಸರ್ಕಾರ ಬದ್ಧವಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ರಾಜ್ಯದ 80 ಐಟಿಐಗಳನ್ನು ಉನ್ನತೀಕರಣ ಮಾಡಲಾಗಿದೆ. ರಾಜ್ಯದ ವಿದ್ಯಾರ್ಥಿಗಳು ಯಾವುದರಲ್ಲೂ ಹಿಂದುಳಿಯಬಾರದು. ಕನ್ನಡಿಗರಿಗೆ ಹೆಚ್ಚು ಅವಕಾಶಗಳು ಸಿಗುವಂತೆ ನಮ್ಮ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸುತ್ತಿದೆ. ಆಡಳಿತ ವ್ಯವಸ್ಥೆಯಲ್ಲಿಯೂ ಕನ್ನಡ ಭಾಷೆ ಇರಬೇಕು. ರಾಜ್ಯದಲ್ಲಿರುವ ಕನ್ನಡಿಗರಿಗೆ ಉತ್ತಮವಾದ ಆಡಳಿತ ಸಿಗಬೇಕು ಮೈಸೂರು ಕರ್ನಾಟಕದಲ್ಲಿ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ನ್ನಡದ ಮಕ್ಕಳಿಗೆ ಉದ್ಯೋಗದ ಭರವಸೆಯನ್ನು ನೀಡಬೇಕಿದೆ. ಆಗ ಮಾತ್ರ ಕನ್ನಡ, ಕನ್ನಡಿಗರ ಶಕ್ತಿ ಹೆಚ್ಚುತ್ತದೆ. ಅದಕ್ಕಾಗಿ ಕೈಗಾರಿಕಾ ತರಬೇತಿ ಕೇಂದ್ರಗಳು, ಪಾಲಿಟೆಕ್ನಿಕ್ ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ರಾಜ್ಯದಲ್ಲಿ ಆರಂಭವಾಗುವ ಉದ್ದಿಮೆಗಳಲ್ಲಿ ಕೌಶಲ ವಲಯದ ಶೇಕಡ 75ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಎಲ್ಲಿ ಭಾಷೆ ಸದೃಢವಾಗಿರುತ್ತದೆಯೋ ಅಲ್ಲಿ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ ಮುಟ್ಟಿಸಬೇಕು. ಕನ್ನಡ ಭಾಷೆ ತಿಳಿಯದವರಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕು. ಆಗ ಮಾತ್ರ ಕರ್ನಾಟಕ ಮತ್ತು ಕನ್ನಡ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ.
ಕನ್ನಡಿಗರು ಪ್ರತಿದಿನವೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. ಕನ್ನಡ ನಮ್ಮ ದೇವರು. ಕನ್ನಡವನ್ನು ಬೃಹತ್ ಹೆಮ್ಮರವಾಗಿ ಬೆಳಸಬೇಕು. ಭಾಷೆ ಸದೃಢವಾಗಿದ್ದರೆ ಆ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಭಾರತದಲ್ಲಿ ಅತ್ಯಂತ ಪುರಾತನವಾದ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಸಿಂಧೂ ನಾಗರಿಕತೆಗೂ ಮೊದಲು ಬಳಕೆಯಲ್ಲಿದ್ದ ಭಾಷೆ ಎಂದು ಹೇಳಿದರು.
ಕನ್ನಡ ಭಾಷೆಗೆ ತನ್ನದೇ ಆದ ಅಂತರ್ಗತ ಶಕ್ತಿ ಇದೆ. ಎಲ್ಲಾ ರಂಗಗಳಲ್ಲಿಯೂ ಕನ್ನಡಕ್ಕೆ ಸ್ಥಾನ ನೀಡಬೇಕು. ಅದಕ್ಕೆ ಪೂರಕವಾಗಿ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಬೋಧಿಸುವ ಕೆಲಸವನ್ನು ತಮ್ಮ ಸರ್ಕಾರ ಆರಂಭಿಸಿದೆ. ಈ ವಿಚಾರದಲ್ಲಿ ಗಟ್ಟಿಯಾದ ನಿಲುವನ್ನು ಸರ್ಕಾರ ಹೊಂದಿದೆ ಎಂದು ಬೊಮ್ಮಾಯಿ ಹೇಳಿದರು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement