ನವದೆಹಲಿ:ದೀಪಾವಳಿ ಸಂಭ್ರಮದ ಮೂಡ್ನಲ್ಲಿರುವ ದೇಶದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಶಾಕ್. ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಜತೆ ಇದೀಗ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಹೆಚ್ಚಳ ಮಾಡಲಾಗಿದೆ. 14.5 ಕೆಜಿಯ ಮನೆ ಬಳಕೆ ಸಿಲಿಂಡರ್ ದರದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ. ಬದಲಾಗಿ 19 ಕೆಜಿಯ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಬರೋಬ್ಬರಿ 265 ರೂಪಾಯಿ ಹೆಚ್ಚಾಗಿದೆ.
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಇಂದಿನಿಂದ 265 ರೂ.ಹೆಚ್ಚಾದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಸಿಲೆಂಡರ್ ಗೆ 2 ಸಾವಿರ ರೂಪಾಯಿ 50 ಪೈಸೆ ನೀಡಬೇಕು.
ಈ ಹಿಂದೆ 1733 ರೂಪಾಯಿ ಇತ್ತು. ಹಾಗೇ ಮುಂಬೈನಲ್ಲಿ 1,683 ರೂಪಾಯಿ ಇದ್ದ 19 ಕೆಜಿ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 1950ರೂಪಾಯಿಗೆ ಏರಿದೆ. ಕೋಲ್ಕತ್ತದಲ್ಲಿ 2073ರೂ.ಗೆ ಏರಿಕೆಯಾಗಿದ್ದು, ಚೆನ್ನೈನಲ್ಲಿ 2133 ರೂಪಾಯಿ ಆಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದ್ದಂತೆ ಹೊಟೇಲ್ ಗಳಲ್ಲಿ ಆಹಾರ ಪದಾರ್ಥಗಳ ಬೆಲೆ, ಬೇಕರಿಗಳಲ್ಲಿನ ತಿಂಡಿ-ತಿನಿಸುಗಳಲ್ಲಿ ಸಹ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಮನೆಬಳಕೆ ಸಿಲಿಂಡರ್ ದರದಲ್ಲಿ ಇಲ್ಲ ಬದಲಾವಣೆ
ಇರುವುದರಲ್ಲಿ ಒಂದು ಸಮಾಧಾನ ಎಂದರೆ 14.2 ಕೆಜಿ ತೂಕದ ಮನೆ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ (ಸಬ್ಸಿಡಿ ರಹಿತ) 899.50 ರೂ. ಇದೆ.
ನಿಮ್ಮ ಕಾಮೆಂಟ್ ಬರೆಯಿರಿ