ಸಾರಾಯಿ ಬ್ಯಾನ್‌ ಮಾಡಿದ್ದಕ್ಕೆ ಪುನೀತ್ ರಾಜಕುಮಾರ​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ಕಿಡಿಗೇಡಿಯ ಬಂಧನ

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು ಅಪಾರ ಸಂಖ್ಯೆಯ ಅಭಿಮಾನಿಗಳು ದುಃಖ ಪಡುತ್ತಿದ್ದರೆ ಕಿಡಿಗೇಡಿಯೊಬ್ಬ ಅವರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್​ ಮಾಡಿದ್ದ. ಆತನ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಬೆಂಗಳೂರು ಸೈಬರ್ ಪೊಲೀಸರು ಆತನನ್ನು ಬಂಧಿಸಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​​ ಅವರು ಟ್ವಿಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
‘ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ತಿಳಿಸಲಾಗಿದೆ.
ಪುನೀತ್​ ನಿಧನದ ಬಳಿಕ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತದ ಮಂದಿಗೆ ಇದರಿಂದ ಕಿರಿಕಿರಿ ಆಗಿತ್ತು. ಹಾಗಾಗಿ ಪುನೀತ್​ ರಾಜ್​ಕುಮಾರ್​​ಗೆ ಅಗೌರವ ತೋರುವಂತಹ ಪೋಸ್ಟ್​ಗಳನ್ನು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರಿತ್ವಿಕ್ಸ್​ (ritvikks) ಎಂಬ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತೀರಾ ಅಶ್ಲೀಲ ಪದಗಳನ್ನು ಬಳಸಿ ಪುನೀತ್​ ರಾಜ್​ಕುಮಾರ್​ ಅವರಿಗೆ ಅವಮಾನ ಮಾಡಲಾಗಿತ್ತು.
ನಿಷೇಧದ ನಡುವೆಯೂ ರಿತ್ವಿಕ್ಸ್​ ಎಂಬ ಈ ವ್ಯಕ್ತಿಗೆ ಲಿಕ್ಕರ್​ ಸಿಕ್ಕಿತ್ತು. ಬಳಿಕ ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ, ಅಶ್ಲೀಲ ಪದಗಳಿಂದ ಪುನೀತ್​ ರಾಜ್​ಕುಮಾರ್​ ಅವರನ್ನು ಅವಮಾನಿಸಿದ್ದ. ಬಿಯರ್​ ಬಾಟಲಿಯ ಚಿತ್ರ ಹಂಚಿಕೊಂಡು, ‘ರಾಜ್​ಕುಮಾರ್​​ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು…. ಮಾಡುತ್ತೇವೆ’ ಎಂದು ಆತ ಬರೆದುಕೊಂಡಿದ್ದ.
ಕಿಡಿಗೇಡಿಯ ಈ ಪೋಸ್ಟ್​ಗೆ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ‘ಕೇವಲ ಆಲ್ಕೋಹಾಲ್​ಗಾಗಿ ಪುನೀತ್​ ಬಗ್ಗೆ ಇಂಥ ವರ್ತನೆಯೇ? ಜನರಲ್ಲಿ ಮನುಷ್ಯತ್ವ ಉಳಿದಿಲ್ಲವೇ?’ ಎಂದು ಸಾನ್ವಿ ಛೀಮಾರಿ ಹಾಕಿದ್ದರು. ಎಲ್ಲದರ ಫಲವಾಗಿ ಈಗ ಆ ಕಿಡಿಗೇಡಿಯ ಬಂಧನ ಆಗಿದೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement