ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಯೋಮಿತಿ ಎರಡು ವರ್ಷ ಹೆಚ್ಚಿಸಲು ಒತ್ತಾಯಿಸಿ ಸಿಎಂಗೆ ಪತ್ರ ಬರೆದ ಸಭಾಪತಿ ಹೊರಟ್ಟಿ

ಹುಬ್ಬಳ್ಳಿ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸುವಂತೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆಪತ್ರ ಬರೆದಿರುವ ಅವರು, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸರ್ಕಾರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕದೊಳಗಾಗಿ ಈ ಹಿಂದೆ ಸರ್ಕಾರ ನಿಗದಿಪಡಿಸಿದ್ದ ಸಾಮಾನ್ಯ ವರ್ಗ- 40 ವರ್ಷ, ಇತರೆ ಹಿಂದುಳಿದ ವರ್ಗ-43 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 45 ವರ್ಷದ ವಯೋಮಿತಿಯೊಳಗೆ ಇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಕಳೆದ ಎರಡು ವರ್ಷಗಳಿಂದ ಜಗತ್ತನ್ನು ಆವರಿಸಿರುವ ಮಹಾಮಾರಿ ಕೊರೊಮಾ ನಾಗರೀಕರ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಜೊತೆಗೆ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಸರಕಾರ ಯಾವುದೇ ನೇಮಕಾತಿ ಮಾಡಿರುವುದಿಲ್ಲ. ಇದರಿಂದ ಹಲವಾರು ಜನ ಪ್ರಾಧ್ಯಾಪಕರ ಹುದ್ದೆಯ ವಯೋಮಿತಿ ಮೀರಿದ್ದಾರೆ. ಆದ್ದರಿಂದ ಪೋಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೇಮಕಾತಿ ವಯೋಮಿತಿಯನ್ನು ಹೆಚ್ಚಿಸಿದಂತೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಯೋಮಿತಿಯನ್ನು ಸಹ ಹೆಚ್ಚಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಕೋವಿಡ್ ಮಹಾಮಾರಿ ಕಾರಣ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದವರೂ (ಯು.ಜಿ.ಸಿ.) ಸಹ ಪ್ರಾಧ್ಯಾಪಕರ ಹುದ್ದೆಗೆ ಇರುವ ಡಾಕ್ಟರೇಟ್ ಪದವಿಯನ್ನು ಪಡೆಯಬೇಕೆಂಬ ಶರತ್ತನ್ನು ಎರಡು ವರ್ಷಗಳ ಮಟ್ಟಿಗೆ ರಿಯಾಯತಿ ನೀಡಿ ಆದೇಶಿಸಿದ್ದಾರೆ. ಈಗ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ವಯೋಮಿತಿ ಸಡಿಲಿಕೆ ಮಾಡದಿದ್ದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ ಮೀರುತ್ತಿರುವ ಹಲವಾರು ಅಭ್ಯರ್ಥಿಗಳು ಇದರಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಿಗದಿಪಡಿಸಿರುವ ವಯೋಮಿತಿಯನ್ನು ಎರಡು ವರ್ಷಗಳ ಸಡಿಲಿಕೆ ಮಾಡಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿಯವರು ಮುಖ್ಯಮಂತ್ರಿಗಳಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಕೂಡಲೇ ವಯೋಮಿತಿ ಸಡಿಲಿಕೆಯ ಕುರಿತ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಿ ಸಹಸ್ರಾರು ನಿರುದ್ಯೋಗಿ ಯುವಜನರಿಗೆ ನ್ಯಾಯ ಒದಗಿಸುವಂತೆ ಕೋರಿದ್ದಾರೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement