ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಗೋಶಾಲೆ ಸ್ಥಾಪನೆಗೆ ಚಿಂತನೆ: ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ :ಅರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಿದ ಹಸು ಹಾಗೂ ಕರುವಿಗೆ ಮುಜರಾಯಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ದೀಪಾವಳಿಯ ಬಲಿ ಪಾಡ್ಯಮಿ ದಿನವಾದ ಶುಕ್ರವಾರ ಗೋಧೂಳಿ ಮುಹೂರ್ತದಲ್ಲಿ ಪೂಜೆಯನ್ನು ನೆರವೇರಿಸುವ ಮೂಲಕ ರಾಜ್ಯಾದ್ಯಂತ ದೀಪಾವಳಿ(ಬಲಿಪಾಡ್ಯಮಿ) ದಿನದಂದು ಅಧಿಸೂಚಿತ ದೇವಸ್ಥಾನಗಳಲ್ಲಿ “ಗೋ ಪೂಜಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಜರಾಯಿ ಇಲಾಖೆಯ ವತಿಯಿಂದ ನಗರದ ಶ್ರೀ ಕಪಿಲೇಶ್ವರ ಮಂದಿರದಲ್ಲಿ ಶುಕ್ರವಾರ (ನ.5) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಇತರೆ ಗಣ್ಯರು ಗೋಪೂಜೆ ನೆರವೇರಿಸಿದರು.
ಗೋಮಾತೆಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನ್ನಿಸಿ ಗೋಗ್ರಾಸವನ್ನು ನೀಡಿದರಲ್ಲದೇ ಧೂಪ-ದೀಪಗಳಿಂದ ಪೂಜಿಸಿದರು. ಸಚಿವೆ ಶಶಿಕಲಾ ಜೊಲ್ಲೆ ಅವರು ಇದಕ್ಕೂ ಮುಂಚೆ ಕಪಿಲೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಜರಾಯಿ ಅವರು, ರಾಜ್ಯದ 35 ಸಾವಿರಕ್ಕೂ ಅಧಿಕ ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲಾಗುತ್ತಿದೆ. ಗೋ ತಳಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಭಾರತ ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಗೋವುಗಳ ರಕ್ಷಣೆ ಮಹತ್ವದ್ದಾಗಿದೆ. ತಾಯಿ ಹಾಲಿಗಿಂತ ಹೆಚ್ಚಾಗಿ ಹಸುವಿನ ಹಾಲು ನಮ್ಮ ಜೀವನದಲ್ಲಿ ಪ್ರಾಮುಖ್ಯತೆ ಹೊಂದಿದೆ. ಹುಲ್ಲು ತಿಂದು ಹಾಲು ನೀಡುವ ಗೋಮಾತೆಯನ್ನು ಇಳಿವಯಸ್ಸಿನಲ್ಲಿ ಕಸಾಯಿಖಾನೆಗೆ ಕಳುಹಿಸುವುದನ್ನು ತಪ್ಪಿಸಲು ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
250 ಕ್ಕೂ ಮೇಲ್ಪಟ್ಟ ದೇವಸ್ಥಾನಗಳಲ್ಲಿ ಮುಂಬರುವ ದಿನಗಳಲ್ಲಿ ಗೋ ಶಾಲೆಗೆ ಆರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾವಾರು ಎ ಮತ್ತು ಬಿ ಗ್ರೇಡ್ ದೇವಸ್ಥಾನಗಳ ಪಟ್ಟಿ ಪಡೆದುಕೊಂಡು ಗೋಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದ ಅವರು ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಅರ್ಚಕರ ಕುಟುಂಬಕ್ಕೆ ಆರೋಗ್ಯ ವಿಮೆ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಅಭಯ್ ಪಾಟೀಲ ಅವರು ಮಾತನಾಡಿ, ಸರಕಾರವು ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ಆರಂಭಿಸುವ ಮೂಲಕ ಗೋಮಾತೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದರು.
ಬೆಳಗಾವಿ ಸಂಸದೆ ಮಂಗಲಾ ಅಂಗಡಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಾಜಿ ಶಾಸಕ ಸಂಜಯ ಪಾಟೀಲ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement