ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ (ನವೆಂಬರ್ ೮)ಯಿಂದ ಎಲ್ ಕೆಜಿ ಮತ್ತು ಯುಕೆಜಿ ಮಕ್ಕಳ ಭೌತಿಕ ತರಗತಿಗಳು ಆರಂಭವಾಗಲಿವೆ.
ಸತತ ೨೦ ತಿಂಗಳಿಂದ ಶಾಲೆಯತ್ತ ಮುಖ ಮಾಡದ ಪುಟಾಣಿಗಳು ನಾಳೆಯಿಂದ ಬ್ಯಾಗುಗಳನ್ನು ಹೇರಿಕೊಂಡು ಶಾಲೆಗೆ ಹೋಗಲು ಸಿದ್ಧರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಎಲ್ಲ ಮಾದರಿಯ ಶಾಲೆಗಳು ಆರಂಭವಾಗುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿದಂತಾಗುತ್ತದೆ.
ಈಗಾಗಲೇ ರಾಜ್ಯಸರ್ಕಾರ ೧ ರಿಂದ ೧೨ನೇ ತರಗತಿಗಳನ್ನು ಹಂತ ಹಂತವಾಗಿ ಆರಂಭಿಸಿದೆ. ನಾಳೆಯಿಂದ ಪೂರ್ವ ಪ್ರಾಥಮಿಕ ತರಗತಿಗಳ ಆರಂಭಕ್ಕೂ ಅನುಮತಿ ನೀಡಿದೆ. ಕೋವಿಡ್ ಪಾಸಿಟಿವಿಟಿ ದರ ೨ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಎಲ್ ಕೆಜಿ, ಯು ಕೆಜಿ ತರಗತಿ ಆರಂಭಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
ಎಲ್ ಕೆಜಿ ಮತ್ತು ಯುಕೆಜಿ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳಲು ಎಲ್ಲ ಶಾಲೆಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಾಲೆ ಮತ್ತು ತರಗತಿಗಳಲ್ಲಿ ಸ್ವಚ್ಛತೆ, ಸ್ಯಾನಿಟೈಸರ್, ಫೀವರ್ ಸ್ಕ್ಯಾನರ್ ಸೇರಿದಂತೆ ಎಲ್ಲ ರೀತಿಯ ಅಗತ್ಯ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಭೌತಿಕ ತರಗತಿಗಳ ಆರಂಭಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಾಲಾ ಆವರಣ, ಪೀಠೋಪಕರಣ, ಕೊಠಡಿಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸರ್ ಮಾಡಲಾಗಿದೆ. ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಹಾಗೂ ಪೋಷಕರು ಕಡ್ಡಾಯವಾಗಿ ೨ ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಸೂಚಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಎಲ್ಲರೂ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಈ ಎಲ್ಲ ವ್ಯವಸ್ಥೆಗಳನ್ನು ಶಾಲೆಗಳಲ್ಲೂ ಮಾಡುವಂತೆ ಸರ್ಕಾರ ಸೂಚಿಸಿದ್ದು, ಶಾಲೆಗೆ ಕಳುಹಿಸುವ ಮುನ್ನ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ.
ಮಕ್ಕಳು ಮನೆಯಿಂದಲೇ ಉಪಾಹಾರ ತರುವುದು, ಕುಡಿಯಲು ಬಿಸಿ ನೀರು, ಕೈ ಸ್ವಚ್ಛತೆಗೆ ಸಾಬೂನು ಹಾಗೂ ಮಕ್ಕಳನ್ನು ಕನಿಷ್ಟ ೨ ಮೀ. ಅಂತರದಲ್ಲಿ ಕೂರಿಸುವಂತೆ ಸೂಚಿಸಲಾಗಿದೆ.
ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್ ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಲಾಗಿದೆ, ಯಾವುದೇ ಮಗು, ಶಿಕ್ಷಕರು ಇತರೆ ಸಿಬ್ಬಂದಿಗೆ ಸೋಂಕು ತಗುಲಿದರೆ ಆ ಶಾಲೆಯ ಎಲ್ಲ ವಿದ್ಯಾರ್ಥಿಗಳ ತಪಾಸಣೆ ನಡೆಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಮಾರ್ಗಸೂಚಿಗಳು.
ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೩.೩೦ಕ್ಕೆ ಮಾತ್ರ ತರಗತಿ.
ಶಾಲೆಗೆ ಬರುವ ಮಕ್ಕಳ ಪೋಷಕರ ಒಪ್ಪಿಗೆಪತ್ರ ಕಡ್ಡಾಯ.
ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಹಾಗೂ ಪೋಷಕರು ಕಡ್ಡಾಯವಾಗಿ ೨ ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು
ಮನೆಯಿಂದಲೇ ಮಕ್ಕಳು ಉಪಾಹಾರ ತರಬೇಕು.
ಬಿಸಿ ನೀರು, ಸಾಬೂನು ವ್ಯವಸ್ಥೆ ಕಲ್ಪಿಸಬೇಕು.
ಕನಿಷ್ಠ ೧ ಮೀ. ಅಂತರದಲ್ಲಿ ಮಕ್ಕಳನ್ನು ಕೂರಿಸಬೇಕು.
ಜ್ವರ, ಕೆಮ್ಮು, ನೆಗಡಿ ಇರುವ ಮಕ್ಕಳು ಶಾಲೆಗೆ ಬರುವಂತಿಲ್ಲ.
ಶಾಲೆಯಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ಕಂಡು ಬಂದರೆ ಶಾಲೆ ಬಂದ್.
ನಿಮ್ಮ ಕಾಮೆಂಟ್ ಬರೆಯಿರಿ