ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಗ್ರೆನೇಡ್ ಪತ್ತೆಯಾಗಿದೆ. ನಿವೃತ್ತ ಸೈನಿಕರೊಬ್ಬರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.
ಇಳಂತಿಲ ಗ್ರಾಮದ ದಾರಿಯಲ್ಲಿ ಐದು ಗ್ರಾನೈಡ್ ಪತ್ತೆಯಾಗಿದೆ. ಭೂಸೇನಾ ರೆಜಿಮೆಂಟ್ನಲ್ಲಿ ಎಸ್ಸಿಒ (SCO) ಆಗಿ ನಿವೃತ್ತಿ ಆಗಿರುವ ಜಯಕುಮಾರ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಗ್ರೆನೇಡ್ ವಶಕ್ಕೆ ಪಡೆದಿದ್ದಾರೆ. ಜಯಕುಮಾರ್ ಶನಿವಾರ ಸಂಜೆ 6 ಗಂಟೆ ವೇಳೆಗೆ ಉಪ್ಪಿನಂಗಡಿಯಿಂದ ತನ್ನ ಮನೆಗೆ ನಡೆದುಕೊಂಡು ತೆರಳುತ್ತಿದ್ದಾಗ ಗುಡ್ಡದ ಇಳಿಜಾರಿನಲ್ಲಿ ಗ್ರೆನೇಡ್ ಮಾದರಿಯ ಸ್ಫೋಟಕ ವಸ್ತು ಕಂಡು ಬಂದಿದೆ. ಅದರಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನಲ್ಲಿ ಒಂದು ಗ್ರೆನೇಡ್ ಇದ್ದು ಇತರ ನಾಲ್ಕು ಗ್ರೆನೇಡ್ ಗಳು ಸ್ಥಳದಲ್ಲೆ ಬಿದ್ದಿತ್ತು, ಆ ವಸ್ತುಗಳನ್ನು ನೋಡಿ ಜಯಕುಮಾರ ಗ್ರೆನೇಡ್ ಎಂಬುದನ್ನು ಕಂಡುಕೊಂಡಿದ್ದಾರೆ.
ಜನರಿಗೆ ಅಪಾಯವಾಗುವುದನ್ನು ತಪ್ಪಿಸಲು ಅವುಗಳನ್ನು ತನ್ನ ಮನೆಯ ಅಂಗಳದ ಮೂಲೆಯಲ್ಲಿಟ್ಟು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಸುಮಾರು 40 ವರ್ಷ ಹಳೆಯ ಕಾಲದ ಗ್ರೆನೇಡ್ ಎಂಬ ಬಗ್ಗೆ ಮಾಹಿತಿ ಇದ್ದು, ಸೇನೆಯಲ್ಲಿ ಬಳಸುತ್ತಿದ್ದ ಗ್ರೆನೇಡ್ ಇಲ್ಲಿ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ