ಜಿಂದಾಲ್‌ಗೆ 3,667 ಎಕರೆ ಜಮೀನು ಪರಭಾರೆ: ಸಂಪುಟ ಸಭೆ ನಿರ್ಧಾರ ಪ್ರಶ್ನಿಸಿದ್ದ ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

ಬೆಂಗಳೂರು: ವಿಜಯನಗರ ಜಿಲ್ಲೆಯ ಸಂಡೂರಿನಲ್ಲಿ ಜಿಂದಾಲ್ ಸೌತ್‌ವೆಸ್ಟ್ ಸ್ಟೀಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ 3,667 ಎಕರೆ ಸರ್ಕಾರಿ ಜಮೀನು ಪರಭಾರೆ ಮಾಡಲು ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿತು.
ಇಡೀ ಪ್ರಕರಣ ಮುಖ್ಯಮಂತ್ರಿಗಳ ಮುಂದೆ ಮರು ಪರಿಶೀಲನೆಯಲ್ಲಿದೆ ಎಂದು ಸರ್ಕಾರಿ ವಕೀಲರು ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ನ್ಯಾಯಪೀಠವು ಬೆಂಗಳೂರಿನ ಕೆ. ಎ. ಪಾಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿ ಆದೇಶಿಸಿತು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಜಮೀನು ಪರಭಾರೆ ಕುರಿತು 2021ರ ಏಪ್ರಿಲ್‌ 26ರಂದು ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಸದ್ಯ ಈ ವಿಚಾರವು ಪರಿಶೀಲನೆಗಾಗಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದಿದೆ. ಮುಖ್ಯಮಂತ್ರಿಗಳು ಈ ವಿಚಾರವನ್ನು ಮರು ಪರಿಶೀಲಿಸಿ, ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸರ್ಕಾರಿ ವಕೀಲರು ತಿಳಿಸಿದರು.
ಅರ್ಜಿದಾರರ ಪರ ವಕೀಲರು “ನಮ್ಮ ಹಿರಿಯ ವಕೀಲರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರ ಅರ್ಜಿ ಸಂಬಂಧ ವಾದ ಮಂಡಿಸಲು ಕಾಲಾವಕಾಶಬೇಕಿದೆ. ಹಾಗಾಗಿ, ವಿಚಾರಣೆ ಮುಂದೂಡಬೇಕು ಎಂದು ಕೋರಿದರಲ್ಲದೆ, ಅರ್ಜಿ ಆಕ್ಷೇಪಣೆ ಸಲ್ಲಿಸುವಂತೆ ಕಳೆದ ಬಾರಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು” ಎಂದು ಪೀಠದ ಗಮನಕ್ಕೆ ತಂದರು.
ಅದಕ್ಕೆ ಒಪ್ಪದ ಪೀಠವು ಅರ್ಜಿಯನ್ನು ವಿಚಾರಣೆ ಮುಂದೂಡಲಾಗದು. ಸರ್ಕಾರಿ ವಕೀಲರ ಹೇಳಿಕೆ ಪರಿಗಣಿಸಿದರೆ ಅರ್ಜಿಯ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದೆನಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.
ನಂತರ ಯಡಿಯೂರಪ್ಪ ಅವರ ನೇತೃತ್ವದ ಹಿಂದಿನ ಸರ್ಕಾರವು ಜಿಂದಾಲ್ ಕಂಪೆನಿಗೆ ಸರ್ಕಾರಿ ಜಮೀನು ಪರಾಬಾರೆ ಮಾಡಲು ತೀರ್ಮಾನಿಸಿತ್ತು. ಆದರೆ, ಸದ್ಯ ಇಡೀ ಪ್ರಕರಣವು ಮುಖ್ಯಮಂತ್ರಿಗಳ ಮುಂದೆ ಮರು ಪರಿಶೀಲನೆಯಲ್ಲಿದೆ. ಆದ್ದರಿಂದ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು ಎಂದು ವರದಿ ತಿಳಿಸಿದೆ.
ವಿಜಯನಗರ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಅಂದಾಜು 3,667 ಎಕರೆ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಪರಭಾರೆ ಮಾಡಲು 2021ರ ಏಪ್ರಿಲ್‌ 26ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಕೈಗೊಂಡ ನಿರ್ಧಾರವನ್ನು ರದ್ದುಪಡಿಸಬೇಕು. ಜಮೀನು ಪರಭಾರೆ ನಿರ್ಧಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ವತಿಯಿಂದ ಸ್ವತಂತ್ರ ಸಂಸ್ಥೆಯೊಂದನ್ನು ನೇಮಿಸಬೇಕು. ಆ ಸಂಸ್ಥೆಯಿಂದ ವರದಿ ತರಿಸಿಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement