ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣಕ್ಕೆಸಂಪುಟ ಸಭೆಯಲ್ಲಿ ನಿರ್ಣಯ: ಬೆಳಗಾವಿಯಲ್ಲಿ ಸಂಭ್ರಮಾಚರಣೆ

ಬೆಳಗಾವಿ : ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟವು ಅಧಿಕೃತ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಕನ್ನಡ ಸಂಘಟನೆಗಳು ಸಂಬ್ರಮಾಚರಣೆ ಮಾಡಿದವು.
ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಾ. ತೋಂಟದ ಸಿದ್ಧರಾಮ ಶ್ರೀಗಳ ಅಭಿನಂದನೆ :
ಈ ಮೊದಲು ಮುಂಬೈ ಕರ್ನಾಟಕ ಎಂದು ಕರೆಯಲ್ಪಡುತ್ತಿದ್ದ ಪ್ರದೇಶವನ್ನು ಕಿತ್ತೂರು ಕರ್ನಾಟಕ ಎಂದು ಹೊಸದಾಗಿ ನಾಮಕರಣಗೊಳಿಸಿರುವುದು ಐತಿಹಾಸಿಕ ನಿರ್ಣಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ನಿರ್ಣಯಕ್ಕೆ ಕಾರಣೀಕರ್ತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಮತ್ತು ಸಚಿವ ಜೆ.ಸಿ. ಮಾಧುಸ್ವಾಮಿಯವರನ್ನು ಇದೇ ಸಂದರ್ಭದಲ್ಲಿ ಶ್ರೀಗಳು ಅಭಿನಂದಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳಾ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚೆನ್ನಮ್ಮ ಹೆಸರುವಾಸಿಯಾಗಿದ್ದಾರೆ. ಐತಿಹಾಸಿಕ ಕಾರಣದಿಂದಾಗಿ ಕಿತ್ತೂರಿನ ಹೆಸರು ದೇಶ-ವಿದೇಶಗಳಲ್ಲಿಯೂ ಸಹಿತ ಪಸರಿಸಿ ಗರಿಷ್ಠ ಸ್ಥಾನಮಾನವನ್ನು ಪಡೆದುಕೊಂಡಿದೆ. ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರಿಂದ ಯಾವತ್ತಿಗೂ ಗುರುತಿಸಲ್ಪಡುವ, ಗೌರವಿಸಲ್ಪಡುವ ಮುಂಬೈ ಕರ್ನಾಟಕಕ್ಕೆ ‘ಕಿತ್ತೂರು ಕರ್ನಾಟಕ’ ಎಂದು ಹೆಸರಿಟ್ಟಿರುವುದು ಈ ಭಾಗದ ಅಸಂಖ್ಯ ಜನರಲ್ಲಿ ಹಬ್ಬದ ವಾತಾವರಣವನ್ನೇ ನಿರ್ಮಾಣ ಮಾಡಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಸಿಹಿಸುದ್ಧಿಯನ್ನು ನೀಡಿದ ಸರಕಾರವನ್ನು ಅಭಿನಂದಿಸಿದ ಶ್ರೀಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಹೊಂದಿರುವ ಕಿತ್ತೂರು ಕರ್ನಾಟಕ ಪ್ರದೇಶವನ್ನು ಸರಕಾರ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಅಭಿವೃದ್ಧಿಪಡಿಸಬೇಕೆಂದು ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement