ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ ಮತ್ತೊಬ್ಬ ರೈತ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
ಮೃತ ರೈತನನ್ನು ಪಂಜಾಬಿನ ಅಮ್ರೋಹ್ ಜಿಲ್ಲೆಯ ನಿವಾಸಿ ಗುರುಪ್ರೀತ್ ಸಿಂಗ್ (45) ಎಂದು ಗುರುತಿಸಲಾಗಿದೆ. ಕುಂಡ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥೀವ ಶರೀರವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ರೈತನ ಸಾವಿಗೆ ನಿಖರ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಗುರುಪ್ರೀತ್ ಸಿಂಗ್ ಭಾರತೀಯ ಕಿಸಾನ್ ಯೂನಿಯನ್‍ನ ಮುಖಂಡ ಜಗತ್‍ಜೀತ್ ಸಿಂಗ್ ದಲೇವಾಲ್ ಅವರ ಸಹಪಾಠಿ ಎಂದು ಹೇಳಲಾಗಿದೆ.
ಕಳೆದ ತಿಂಗಳು ಲಕ್ಬೀರ್ ಸಿಂಗ್ ಎಂಬ ರೈತನನ್ನು ಕೈಕಾಲುಗಳನ್ನು ಕತ್ತರಿಸಿ ಹಲವು ಕಡೆ ಇರಿದು ಕೊಲೆ ಮಾಡಿ ಆತನನ್ನು ಪೊಲೀಸ್ ಬ್ಯಾರಿಕೇಡಿಗೆ ಕಟ್ಟಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಮತ್ತಿಬ್ಬರು ತಾವೇ ಶರಣಾಗತರಾಗಿದ್ದರು. ಈಗ ಮತ್ತೊಬ್ಬ ರೈತ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ವರ್ಷ ನ.26ರಿಂದ ದೆಹಲಿಯ ಗಡಿಗಳಲ್ಲಿ ಪಂಜಾಬ್, ಹರಿಯಾಣ, ಉತ್ತರಪ್ರದೇಶದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ 11 ಸುತ್ತಿನ ಮಾತುಕತೆಗಳನ್ನು ನಡೆಸಿದರೂ ಕೂಡ ಸಂಧಾನ ಮಾತುಕತೆ ಫಲ ನೀಡಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ