ಭೂಮಿಯೊಳಗಿನ ರಾಸಾಯನಿಕ ಪ್ರಕ್ರಿಯೆಗಳಿಂದ ಲಘು ಭೂಕಂಪನ, ಭಯಪಡಬೇಕಾಗಿಲ್ಲ, ಐದು ದಿನಗಳಲ್ಲಿ ಸರ್ಕಾರಕ್ಕೆ ವರದಿ: ಅಧ್ಯಯನ ತಂಡ

ಕಲಬುರಗಿ: ಕಳೆದ ಅಕ್ಟೋಬರ್ 11 ರಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಮತ್ತು ಪಕ್ಕದ ಬೀದರ ಮತ್ತು ವಿಜಯಪುರದಲ್ಲಿ ಕೇಳಿ ಬರುತ್ತಿರುವ ಭೂಕಂಪನ ಸದ್ದಿನ ಕುರಿತ ವೈಜ್ಞಾನಿಕ ವರದಿಯನ್ನು ಅಧ್ಯಯನ ತಂಡಗಳು ಮುಂದಿನ 5 ದಿನದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿವೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ.ಮನೋಜ ರಾಜನ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಭೂಕಂಪನ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಗಾರದ ನಂತರ ಈ ಕುರಿತು ವಿವರಣೆ ನೀಡಿದ ಅವರು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ನಿರಂತರ ಭೂ ಕಂಪನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಸದ್ಯ ಈಗ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಲಘು ಭೂಕಂಪವಾಗುತ್ತಿದೆ. ಜನರು ಆತಂಕಕ್ಕೊಳಗಾಗಬೇಕಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಸುತ್ತಮುತ್ತ ಗ್ರಾಮದಲ್ಲಿ ಭೂಕಂಪನ ಸದ್ದು ಪದೇ ಪದೇ ಆಗುತ್ತಿರುವ ಕಾರಣ ಇದರ ವೈಜ್ಞಾನಿಕ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವು ವಿವಿಧ ವಿಜ್ಞಾನಿಗಳನ್ನೊಳಗೊಂಡ ಎರಡು ತಂಡಗಳು ನೇಮಿಸಿದ್ದು, ಈ ತಂಡಗಳು ಕಲಬುರಗಿ, ಬೀದರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸೋಮವಾರ ಸಂಚರಿಸಿ ಅಧ್ಯಯನ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ ಎಂದರು.
ಅಧ್ಯಯನ ನಡೆಸಿದ ತಜ್ಞರ ತಂಡ 5 ದಿನದಲ್ಲಿ ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಲಿದೆ. ಅಧ್ಯಯನ ನಡೆಸಿದ ತಜ್ಞರು, ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಲಘು ಭೂಕಂಪವಾಗುತ್ತಿದೆ. ರಾಜ್ಯದಲ್ಲಿ ಭಾರಿ ಪ್ರಮಾಣದ ಭೂಕಂಪ ಆಗುವುದಿಲ್ಲ. ಹೀಗಾಗಿ ರಾಜ್ಯದ ಜನರ ಭಯಪಡಬೇಕಾದ ಅಗತ್ಯವಿಲ್ಲ ಎಂದು ಅಧ್ಯಯನ ಮಾಡಿದ ವಿಜ್ಞಾನಿಗಳ ತಂಡ ಮಾಹಿತಿ ನೀಡಿದೆ ಎಂದು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಸಿ.ಪ್ರಭಾಕರ ಮತ್ತು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಬೆಂಗಳೂರಿನ ಲ್ಯಾಂಡ್ ಸ್ಲೈಡ್ ವಿಭಾಗದ ನಿರ್ದೇಶಕ ಆರ್. ಸಜೀವ, ನವದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೋಲಾಜಿ ಸಂಸ್ಥೆಯ ವಿಜ್ಞಾನಿ ಡಾ. ಎ.ಪಿ.ಸಿಂಗ್ ಮತ್ತು ಹೈದ್ರಾಬಾದಿನ ಎನ್.ಜಿ.ಆರ್.ಐ ಸಂಸ್ಥೆಯ ವಿಜ್ಞಾನಿ ಡಾ. ಶಶಿಧರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ (ಯೋಜನೆ) ಹರೀಷ್ ಹೆಚ್.ಪಿ. ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ತೇಜಸ್ವಿ ಅವರ ನೇತೃತ್ವದ ಮೂರು ವಿಜ್ಞಾನಿಗಳ ತಂಡಗಳು ಕ್ಷೇತ್ರ ಭೇಟಿ ಮಾಡಿ ಸ್ಥಳೀಯ ಭೂಮಿಯ ಮಣ್ಣು ಮತ್ತು ಕಲ್ಲಿನ ಕುರಿತು ಸಮಗ್ರ ಅಧ್ಯಯನ ಮಾಡಿವೆ. ತಂಡಗಳು ಸರ್ಕಾರಕ್ಕೆ ವೈಜ್ಞಾನಿಕ ವರದಿ ಸಲ್ಲಿಸಲಿದ್ದು, ಅದರನ್ವಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.
ಎನ್.ಜಿ.ಆರ್.ಐ ಹೈದ್ರಾಬಾದ, ಎನ್.ಐ.ಆರ್.ಎಂ. ಬೆಂಗಳೂರು, ಸಿ.ಎಸ್.ಐ.ಆರ್ ಬೆಂಗಳೂರು, ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಬೆಂಗಳೂರು, ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೋಲಾಜಿ ನವದೆಹಲಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕೆ.ಎಸ್.ಡಿ.ಎಂ.ಎ & ಕೆ.ಎಸ್.ಎನ್.ಡಿ.ಎಂ.ಸಿ ಹೀಗೆ 9 ಸಂಸ್ಥೆಗಳು ಜಂಟಿಯಾಗಿ ಭೂಕಂಪನದ ಕುರಿತು ಅಧ್ಯಯನ ನಡೆಸಿದ್ದು, ಅದರ ಪ್ರಾತ್ಯಕ್ಷಿತೆ ಇಂದು ಪ್ರಸ್ತುತಪಡಿಸಲಾಗಿದೆ. ಇದನ್ನು ಕ್ರೋಢಿಕರಿಸಿ ತಂಡಗಳು ಸರ್ಕಾರಕ್ಕೆ ವರದಿ ಸಲ್ಲಿಸಲಿವೆ ಎಂದರು.
ವಿಜ್ಞಾನಿ ತಂಡಗಳ ಪ್ರಾಥಮಿಕ ಮಾಹಿತಿ ಪ್ರಕಾರ ಜಿಲ್ಲೆಯ ಗಡಿಕೇಶ್ವರ, ವಿಜಯಪುರ ಸೇರಿದಂತೆ ದೇಶದ ವಿವಿಧ ಪ್ರದೇಶದಲ್ಲಿ ಈ ರೀತಿಯ ಸಣ್ಣ ಪ್ರಮಾಣದ ಭೂಕಂಪನಗಳು ಜರುಗಿವೆ. ಇದರಿಂದ ಭಯಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಸಿ.ಪ್ರಭಾಕರ ಮಾತನಾಡಿ ಇಲ್ಲಿ ಸುಣ್ಣದ ಕಲ್ಲಿನ ಪದೇಶವಾಗಿದೆ. ಇತ್ತೀಚೆಗೆ ಹೆಚ್ಚಿನ ಮಳೆಯ ಕಾರಣ ಸುಣ್ಣದ ಕಲ್ಲು ಮತು ನೀರಿನ ಮಿಶ್ರಣದಿಂದ ಈ ರೀತಿಯ ಸದ್ದುಗಳು ಬರುವ ಸಾಧ್ಯತೆವಿದ್ದು, ಸಮಗ್ರ ಅಧ್ಯಯನ ಮಾಡಲಾಗುತ್ತಿದೆ. ತೀರಾ ಸಣ್ಣ ಪ್ರಮಾಣದ ಭೂಕಂಪನಗಳು ಇದಾಗಿರುವುದರಿಂದ ಗ್ರಾಮಸ್ಥರು ಭಯಪಡುವ ಅವಶ್ಯಕತೆವಿಲ್ಲ ಎಂದರು.
ಪ್ರತಿ ವರ್ಷ ವಿಶ್ವದಾದ್ಯಂತ 10 ಲಕ್ಷ ಸಂಖ್ಯೆಯಲ್ಲಿ ಸಣ್ಣ ಪ್ರಮಾಣದ ಭೂಕಂಪನಗಳು ಸಂಭವಿಸುತ್ತವೆ. ಕರ್ನಾಟಕ ರಾಜ್ಯವು ಸ್ಥಿರ ಭೂಮಿ ಹೊಂದಿರುವುದರಿಂದ ಇಲ್ಲಿ ಹೆಚ್ಚಿನ ಹಾನಿಯಾಗುವುದಿಲ್ಲ. ಗಣಿಗಾರಿಕೆ, ಕೈಗಾರಿಕೆಗಳಿಂದ ಭೂಕಂಪನ ಸಂಭವಿಸುತ್ತದೆ ಎಂಬ ಮಾತು ಸುಳ್ಳಾಗಿದ್ದು, ಯಾವುದೇ ವೈಜ್ಞಾನಿಕ ಪುರಾವೆ ದೊರೆತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಕಲಬುರಗಿ ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ವಿವಿಧ ಸೇರಿದಂತೆ ಅಧಿಕಾರಿಗಳಿದ್ದರು.

ಪ್ರಮುಖ ಸುದ್ದಿ :-   ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ, ಸುಳ್ಳು ಪ್ರಕರಣ ದಾಖಲು : ಬಂಧನದ ನಂತರ ರೇವಣ್ಣ ಮೊದಲ ಪ್ರತಿಕ್ರಿಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement