ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಮರುಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ನಿರ್ಧಾರ

ನವದೆಹಲಿ: ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ರದ್ದು ಮಾಡಲಾಗಿದ್ದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಪುನಃಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ 2021-22 ರ ಆರ್ಥಿಕ ವರ್ಷದ ಉಳಿದ ಭಾಗಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯೋಜನೆಯು 2025-26 ರ ವರೆಗೆ ಮುಂದುವರಿಯುತ್ತದೆ. 2021-22ರ ಉಳಿದ ಅವಧಿಗೆ ಪ್ರತಿ ಸಂಸದರಿಗೆ 2 ಕೋಟಿ ರೂ.ಗಳಂತೆ ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. 2022-23 ರಿಂದ 2025-26 ರವರೆಗೆ ಈ ಯೋಜನೆಯಡಿಯಲ್ಲಿ ಪ್ರತಿ ಸಂಸದರಿಗೆ ತಲಾ 2.5 ಕೋಟಿ ರೂ.ಗಳಂತೆ ಎರಡು ಕಂತುಗಳಲ್ಲಿ ವಾರ್ಷಿಕ 5 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ, ಸರ್ಕಾರವು 2020-21 ಮತ್ತು 2021-22 ರ ಅವಧಿಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಸ್ಥಗಿತಗೊಳಿಸಿತ್ತು. ಈ ಹಣವನ್ನು ಆರೋಗ್ಯ ಸೇವೆಗಳನ್ನು ನಿರ್ವಹಿಸಲು ಮತ್ತು ದೇಶದಲ್ಲಿ ಕೊವಿಡ್ -19 ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮಕ್ಕಾಗಿ ಬಳಸಲಾಗುತ್ತದೆ ಎಂದು ಹೇಳಿತ್ತು. ಈ ಯೋಜನೆಯಡಿ, ಸಂಸದರು ತಮ್ಮ ಕ್ಷೇತ್ರಗಳಲ್ಲಿ ಪ್ರತಿ ವರ್ಷ 5 ಕೋಟಿ ರೂಪಾಯಿ ವೆಚ್ಚವನ್ನು ಒಳಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಶಿಫಾರಸು ಮಾಡಬಹುದು.
ಭಾರತೀಯ ಹತ್ತಿ ನಿಗಮಕ್ಕೆ 17,408.85 ಕೋಟಿ ರೂ.ಗಳ ಬದ್ಧ ಬೆಲೆ ಬೆಂಬಲಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 2014-15 ರಿಂದ 2020-21 ರವರೆಗಿನ ಹತ್ತಿ ಋತುವಿನಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್) ಹತ್ತಿಗೆ ಎಂಎಸ್​​ಪಿ ಆಪ್‌ಗಳ ಅಡಿಯಲ್ಲಿ ನಷ್ಟವನ್ನು ಮರುಪಾವತಿಸಲು ಸಿಸಿಇಎ (CCEA) ಅನುಮೋದಿಸಿದೆ.
ಜೂಟ್ ಪ್ಯಾಕೇಜಿಂಗ್ ಮೆಟೀರಿಯಲ್ ಆಕ್ಟ್, 1987ರ ಅಡಿಯಲ್ಲಿ 2021-22 ರ ಸೆಣಬಿನ ಪ್ಯಾಕೇಜಿಂಗ್ ಮೆಟೀರಿಯಲ್‌ಗಳಿಗೆ ಮೀಸಲು ಮಾನದಂಡಗಳನ್ನು ಕ್ಯಾಬಿನೆಟ್ ಅನುಮೋದಿಸಿರುವುದರಿಂದ ಶೇ 100 ಆಹಾರ ಧಾನ್ಯಗಳು ಮತ್ತು ಶೇ20 ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಅಡಿಯಲ್ಲಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ ಎಥೆನಾಲ್ ಅನ್ನು ಸಂಗ್ರಹಿಸುವ ಕಾರ್ಯವಿಧಾನವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಸಿ ಹೆವಿ ಸಿ ಮೊಲಸಿಸ್ ನಿಂದ ಎಥೆನಾಲ್‌ನ ಬೆಲೆ ರೂ 46.66/ಲೀಟರ್‌ಗೆ ಏರಿಕೆಯಾಗಿದೆ. ಬಿ ಹೆವಿ ಸಿ ಮೊಲಸಿಸ್ ನಿಂದ ಎಥೆನಾಲ್‌ನ ಬೆಲೆ ಲೀಟರ್‌ಗೆ 59.08 ರೂ.ಗೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಭಗವಾನ್ ಬಿರ್ಸಾ ಮುಂಡಾ ಜನ್ಮದಿನವಾದ ನವೆಂಬರ್ 15 ಅನ್ನು ‘ಜನಜಾತಿಯ ಗೌರವ್ ದಿವಸ್’ ಎಂದು ಘೋಷಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಬುಡಕಟ್ಟು ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು 15-22 ನವೆಂಬರ್ 2021 ರಿಂದ ವಾರದ ಅವಧಿಯ ಆಚರಣೆಗಳನ್ನು ಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement